ADVERTISEMENT

ಕ್ರೀಡಾಂಗಣಗಳಲ್ಲಿ ಮೂಲಸೌಕರ್ಯದ ಕೊರತೆ

ಜಿಲ್ಲೆಯ ಕ್ರೀಡಾಪಟುಗಳಿಗೆ ದೊರೆಯದ ಪ್ರೋತ್ಸಾಹ

ಚಂದ್ರಕಾಂತ ಮಸಾನಿ
Published 25 ಸೆಪ್ಟೆಂಬರ್ 2023, 5:54 IST
Last Updated 25 ಸೆಪ್ಟೆಂಬರ್ 2023, 5:54 IST
 ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಪಾಳು ಬಿದ್ದ ರನ್ನಿಂಗ್‌ ಟ್ರ್ಯಾಕ್
 ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಪಾಳು ಬಿದ್ದ ರನ್ನಿಂಗ್‌ ಟ್ರ್ಯಾಕ್   

ರಾಯಚೂರು: 2014ರಲ್ಲಿ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಘೋಷಣೆ ಮಾಡಿದಾಗ ಕ್ರೀಡಾಪಟುಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಆದರೆ, ಈ ಸಂತಸ ಬಹಳ ದಿನಗಳವರೆಗೆ ಉಳಿಯಲೇ ಇಲ್ಲ. ಹಳೆಯ ಕ್ರೀಡಾಂಗಣದ ಕಟ್ಟಡ ತೆರವುಗೊಳಿಸಿ ಬಹುಕೋಟಿ ವೆಚ್ಚದಲ್ಲಿ ಬಹೃತ್‌ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಿದರೂ ಇಲ್ಲಿ ಕ್ರೀಡಾಪಟುಗಳಿಗೆ ಸರಿಯಾದ ಸೌಲಭ್ಯ ದೊರಕುತ್ತಿಲ್ಲ.

ಕ್ರೀಡಾಂಗಣದಲ್ಲಿ ನೀರಿನ ವ್ಯವಸ್ಥೆ ಇಲ್ಲ. ಮೈದಾನದಲ್ಲಿ ರನ್ನಿಂಗ್‌ ಟ್ರ್ಯಾಕ್‌, ಸರಿಯಾದ ಕ್ರಿಕೆಟ್‌ ಪಿಚ್‌, ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ನಿರ್ಮಿಸಿಲ್ಲ. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳು ಇಲ್ಲ. ಆವರಣ ಗೋಡೆ ನಿರ್ಮಿಸದ ಕಾರಣ ಸಾಕು ನಾಯಿ ಮಾಲೀಕರು ವಾಕಿಂಗ್‌ಗೆ ಬಂದು ನಾಯಿಗಳಿಂದ ಹೊಲಸು ಮಾಡಿಸುತ್ತಿದ್ದಾರೆ. ಕಿಡಿಗೇಡಿಗಳು ಇಲ್ಲಿಗೆ ಬಂದು ಪ್ಲಾಸ್ಟಿಕ್‌ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿ ಅಥ್ಲಿಟ್‌ಗಳ ಸಂಖ್ಯೆ ಅಧಿಕ ಇದೆ. ಕ್ರೀಡಾಪುಟಗಳ ಅಭ್ಯಾಸಕ್ಕೆ ಕ್ರೀಡಾಂಗಣವೇ ಇಲ್ಲದ ಕಾರಣ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಕಡಿಮೆಯಾಗಿವೆ. ರಾಯಚೂರ ನಗರದಲ್ಲಿ ಎಲ್ಲಿಯೂ ಸಿಂಥೆಟಿಕ್‌ ಟ್ರ್ಯಾಕ್‌ ಇಲ್ಲ. ಹೀಗಾಗಿ ಕ್ರೀಡಾಪಟುಗಳು ರಸ್ತೆ ಮೇಲೆ ಅಭ್ಯಾಸ ಮಾಡುವ ಸ್ಥಿತಿ ಇದೆ. ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಲ್ಲಿ ಅನೇಕ ಕ್ರೀಡಾ ಪ್ರತಿಭೆಗಳು ಮೂಲೆಗುಂಪಾಗಿವೆ ಎಂದು ಅಥ್ಲಿಟ್‌ಗಳು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಗರದಲ್ಲಿ ಅಂದಾಜು ₹ 22 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣವಾಗಿದೆ. ಇನ್ನೂ ಒಳಚರಂಡಿ, ಸಿಂಥೆಟಿಕ್‌ ಟ್ರ್ಯಾಕ್ ನಿರ್ಮಾಣವಾಗಬೇಕಿದೆ. ಈಗಾಗಲೇ ಕ್ರೀಡಾ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ₹ 3.25 ಕೋಟಿ ವೆಚ್ಚದ ಪ್ರಸ್ತಾವವನ್ನೂ ಸಲ್ಲಿಸಲಾಗಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ನಾಯಕ ಹೇಳುತ್ತಾರೆ.

ದೇವದುರ್ಗ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿಗೆ ನಿರಾಸಕ್ತಿ

ದೇವದುರ್ಗ: ಪಟ್ಟಣದ ಹೊರವಲಯದ ತಾಲ್ಲೂಕು ಕ್ರೀಡಾಂಗಣದಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವ ಕಾರಣ ಕ್ರೀಡಾಪಟುಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

2005ರಲ್ಲಿ ಹನುಮಂತಪ್ಪ ಅಲ್ಕೊಡ ಕ್ರೀಡಾ ಸಚಿವರಾಗಿದ್ದ ಅವಧಿಯಲ್ಲಿ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿಪಡಿಸಲಾಗಿತ್ತು. ಇದು ದೇವದುರ್ಗದಿಂದ 4 ಕಿ.ಮೀ ದೂರದಲ್ಲಿದೆ. 2018 ರಲ್ಲಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಕ್ರೀಡಾಂಗಣದ ವರೆಗಿನ ರಸ್ತೆ ನಿರ್ಮಾಣಕ್ಕೆ ₹ 29 ಲಕ್ಷ ಮೀಸಲಿಡಲಾಗಿತ್ತು, ನಂತರ ಪುರಸಭೆಯ ಚುನಾಯಿತ ಸದಸ್ಯರು ಸಭೆ ನಡೆಸಿ ಅನುದಾನ ಮರಳಿ ಪಡೆದರು. ಕ್ರೀಡಾಂಗಣ ದೊಂಡಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಾರಣ ಪಂಚಾಯಿತಿಯವರೇ ಅಭಿವೃದ್ಧಿಪಡಿಸಬೇಕು ಎಂಬುದು ಪುರಸಭೆಯ ವಾದ.

ವಿಶಾಲವಾದ ಮೈದಾನವಿದ್ದರೂ ಕ್ರೀಡಾಂಗಣದಲ್ಲಿ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಮತ್ತು ಉತ್ತಮ ರಸ್ತೆ ಇಲ್ಲದೆ ಕ್ರೀಡಾಸಕ್ತರು ಮೈದಾನದ ಹತ್ತಿರ ಬರುತ್ತಿಲ್ಲ. ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ತಾಲ್ಲೂಕು ಮಟ್ಟದ ಕ್ರೀಡೆಗಳು ಮಾತ್ರ ಈ ಕ್ರೀಡಾಂಗಣದಲ್ಲಿ ನಡೆಯುತ್ತವೆ.

ದೇವದುರ್ಗದ ವಿವಿಧ ವಸತಿ ನಿಲಯಗಳ ಯುವಕ ಯುವತಿಯರು ಸೈನಿಕ ಅಕಾಡೆಮಿ ವತಿಯಿಂದ ತರಬೇತಿ ಪಡೆಯುತ್ತಿದ್ದಾರೆ. ಅವರೇ ಇಲ್ಲಿ ನೀರು ಹೊತ್ತು ತರುತ್ತಿದ್ದಾರೆ. ಮೂಲ ಸೌಕರ್ಯ ಇಲ್ಲದ ಕಾರಣ ಕ್ರಿಕೆಟ್ ಪಟುಗಳು ಖಾಸಗಿ ಹೊಲಗಳನ್ನು ಲೀಜ್‌ಗೆ ಪಡೆದು ಅಭ್ಯಾಸ ನಡೆಸುತ್ತಿದ್ದಾರೆ.

ಸಿರವಾರ: ಕನಸಾಗಿ ಉಳಿದ ಕ್ರೀಡಾಂಗಣ

ಸಿರವಾರ: ಕಳೆದ ಬಾರಿಯ ಶಾಸಕರು ಕ್ರೀಡಾಂಗಣಕ್ಕೆ ಸ್ಥಳ ಗುರುತಿಸಿ ₹2 ಕೋಟಿ ಅನುದಾನ ನೀಡಿದರೂ ಲೋಕೋಪಯೋಗಿ ಇಲಾಖೆಯಿಂದ ಕಂದಾಯ ಇಲಾಖೆಗೆ ಮೀಸಲು ಸ್ಥಳ ಹಸ್ತಾಂತರವಾಗಿಲ್ಲ. ಕ್ರೀಡಾಂಗಣ ಇನ್ನೂ ಕನಸಾಗಿಯೇ ಉಳಿದಿದೆ.

ತಾಲ್ಲೂಕು ಕೇಂದ್ರವಾದ ನಂತರ ಶಾಲಾ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳನ್ನು ನಡೆಸಲು ಬೇರೆ ಬೇರೆ ಸ್ಥಳಗಳನ್ನು ಆಯ್ಕೆ ಮಾಡಿ ಒಂದೊಂದು ಬಗೆಯ ಆಟಗಳನ್ನು ಒಂದೊಂದು ಕಡೆ ಆಡಿಸುವ ಪರಿಸ್ಥಿತಿ ಇದೆ.

ಕ್ರೀಡೆಯಲ್ಲಿ ಸಾಧನೆ ಮಾಡುವ ಕನಸು ಹೊತ್ತಿರುವ ಯುವಕರಿಗೆ ಶಾಲಾ ಆವರಣ, ದೇವಸ್ಥಾನದ ಆವರಣಗಳೇ ಸದ್ಯ ಕ್ರೀಡಾಂಗಣವಾಗಿವೆ. ಕ್ರೀಡಾಪಟುಗಳ ಮನವಿಗೆ ಅಧಿಕಾರಿಗಳು ಹಾಗೂ ಸರ್ಕಾರ ಸ್ಪಂದಿಸುತ್ತಿಲ್ಲ.

ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಅಪೂರ್ಣ

ಮಾನ್ವಿ: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ತಾಲ್ಲೂಕು ಕ್ರೀಡಾಂಗಣದ ‌ಕಾಮಗಾರಿ ಆರಂಭವಾದರೂ ಪೂರ್ಣವಾಗಿಲ್ಲ. ಕಳೆದ ಅವಧಿಯಲ್ಲಿ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ತಾಲ್ಲೂಕು ಕ್ರೀಡಾಂಗಣದ ಮಂಜೂರಾತಿಗೆ ವಿಶೇಷ ಆಸಕ್ತಿ ವಹಿಸಿದ್ದರು. ಮೂರು ವರ್ಷಗಳ ಹಿಂದೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕ್ರೀಡಾಂಗಣ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ₹ 5ಕೋಟಿ ಬಿಡುಗಡೆ ಮಾಡಲಾಗಿತ್ತು.

ಆದರೆ, ಕಾಮಗಾರಿ ತೆವಳುತ್ತ ಸಾಗಿದೆ. ಕುಡಿಯುವ ನೀರು, ಶೌಚಾಲಯ, ಪೆವಿಲಿಯನ್, ಪೀಠೋಪಕರಣ, ಕಾಮೆಂಟರಿ ಸಲಕರಣೆ, ವಿದ್ಯುತ್ ಸಂಪರ್ಕ, ಆವರಣ ಗೋಡೆ ನಿರ್ಮಾಣ ಆಗಬೇಕಿದೆ.

ಸುಸಜ್ಜಿತ ಕ್ರೀಡಾಂಗಣ ನಿರ್ವಹಣೆ ಸವಾಲು

ಲಿಂಗಸುಗೂರು: ಹಲವು ಹೋರಾಟಗಳ ಬಳಿಕ ಆರು ಎಕರೆ ಜಾಗದಲ್ಲಿ ನಿರ್ಮಿಸಿದ ಕ್ರೀಡಾಂಗಣಕ್ಕೆ ಇದೀಗ ನಿರ್ವಹಣೆಯೇ ಸವಾಲಾಗಿ ಪರಿಣಮಿಸಿದೆ.

ಕ್ರೀಡಾಂಗಣದಲ್ಲಿ ಪೆವಿಲಿಯನ್, ಕೊಠಡಿಗಳು ಹಾಗೂ ಪ್ರೇಕ್ಷಕರು ಕುಳಿತುಕೊಳ್ಳಲು ಗ್ಯಾಲರಿ ನಿರ್ಮಿಸಲಾಗಿದೆ. ರನ್ನಿಂಗ್ ಟ್ರ್ಯಾಕ್, ವಾಲಿಬಾಲ್, ಕಬಡ್ಡಿ, ಕೊಕ್ಕೊ, ಎತ್ತರ ಜಿಗಿತ, ಉದ್ದ ಜಿಗಿತ ಅಂಕಣ, ಕ್ರೀಡಾಪಟುಗಳಿಗೆ ಪ್ರತ್ಯೇಕ ಶೌಚಾಲಯ ಮತ್ತು ಸ್ನಾನಗೃಹಗಳ ವ್ಯವಸ್ಥೆ ಇದೆ. 2022 ಆಗಸ್ಟ್ 15ರಂದು ಕ್ರೀಡಾಂಗಣ ಉದ್ಘಾಟನೆಯಾಗಿದೆ.

ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ನಿರ್ವಹಣೆಗೆ ಬಿಡಿಕಾಸು ನೀಡುತ್ತಿಲ್ಲ. ಒಳಾಂಗಣ ಕ್ರೀಡಾಂಗಣವನ್ನು ಕ್ರೀಡಾಪಟುಗಳೇ ಹಣ ಸಂಗ್ರಹಿಸಿ ನಿರ್ವಹಣೆ ಮಾಡುತ್ತಿದ್ದಾರೆ. ಹೊರಾಂಗಣ ಕ್ರೀಡಾಂಗಣ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ತುಂಬಿರುವ ಹರಳುಗಳು
ದೇವದುರ್ಗ ಪಟ್ಟಣದ ಕೊಪ್ಪರ ಕ್ರಾಸ್ ಹತ್ತಿರ ಇರುವ ತಾಲ್ಲೂಕು ಕ್ರೀಡಾಂಗಣ
ಮಾನ್ವಿಯಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿರುವ ಪ್ರೇಕ್ಷಕರ ಗ್ಯಾಲರಿ
ಸಿರವಾರ ತಾಲ್ಲೂಕು ಕ್ರೀಡಾಂಗಣದ ಜಾಗದಲ್ಲಿ ಎಸೆಯಲಾದ ಕಸ
ಲಿಂಗಸುಗೂರು ತಾಲ್ಲೂಕು ಕ್ರೀಡಾಂಗಣದ ಹೊರನೋಟ
ಕ್ರೀಡಾಂಗಣ ಇಲ್ಲದ ಮಸ್ಕಿ ತಾಲ್ಲೂಕು
ಮಸ್ಕಿ: ನೂತನ ತಾಲ್ಲೂಕು ಕೇಂದ್ರ ಸ್ಥಾನವಾದ ಮಸ್ಕಿ ಪಟ್ಟಣದಲ್ಲಿ ತಾಲ್ಲೂಕು ಕ್ರೀಡಾಂಗಣ ಇಲ್ಲದೇ ಕ್ರೀಡಾಪಟುಗಳು ಪರದಾಡಬೇಕಾದ ಪರಿಸ್ಥಿತಿ ಬಂದಿದೆ. ಕ್ರೀಡಾಂಗಣ ನಿರ್ಮಿಸುವಂತೆ ಹತ್ತು ವರ್ಷಗಳಿಂದ ಕ್ರೀಡಾಪಟುಗಳು ನಡೆಸುತ್ತಿರುವ ಹೋರಾಟಕ್ಕೆ ಇಂದಿಗೂ ಸ್ಪಂದನೆ ದೊರೆತಿಲ್ಲ. ತಾಲ್ಲೂಕು ಕ್ರೀಡಾಂಗಣ ಇಲ್ಲದ ಕಾರಣ ಸರ್ಕಾರಿ ಕೇಂದ್ರ ಪ್ರಾಥಮಿಕ‌ ಶಾಲೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಬಯಲು ಜಾಗದಲ್ಲಿಯೇ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ಕವಿತಾಳ ರಸ್ತೆಯಲ್ಲಿ ನೀರಾವರಿ ಇಲಾಖೆಗೆ ಸೇರಿದ ಹತ್ತು ಎಕರೆ ಜಾಗವನ್ನು ಶಾಸಕ ಆರ್. ಬಸನಗೌಡ ತುರ್ವಿಹಾಳ‌ ಪರಿಶೀಲನೆ ಮಾಡಿದ್ದರು. ಆದರೆ ಮುಂದಿನ ಪ್ರಕ್ರಿಯೆ ನಡೆಯಲೇ ಇಲ್ಲ. ಶಾಸಕರು ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಆಸಕ್ತಿ ತೋರಿಸಬೇಕು. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎನ್ನವುದು ಕ್ರೀಡಾಪಟುಗಳ ಆಗ್ರಹ.
ಸಿಂಧನೂರಲ್ಲಿ ಮಾದರಿ ಕ್ರೀಡಾಂಗಣ
ಸಿಂಧನೂರು: ನಗರದ ಕುಷ್ಟಗಿ ರಸ್ತೆಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ₹ 5 ಕೋಟಿ ವೆಚ್ಚದಲ್ಲಿ ಮಾದರಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಕ್ರೀಡಾಂಗಣಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಕ್ರೀಡಾಂಗಣದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಜಿಮ್ ವ್ಯವಸ್ಥೆ ರೋಲರ್ ಪಿಚ್‍ರೋಲರ್ ಗ್ರಾಸ್ ಕಟ್ಟಿಂಗ್ ಮಷಿನ್ ಇದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಆಸನ ಹಾಗೂ ಪೀಠೋಪಕರಣಕ್ಕೆ ಸರ್ಕಾರ ₹ 2 ಕೋಟಿ ಬಿಡುಗಡೆ ಮಾಡಿದೆ. ಬಾಕಿ ಕಾಮಗಾರಿಗಳು ನಡೆಯಬೇಕಿದೆ. ‘ಪ್ರಮುಖರು ಸಮಿತಿ ರಚಿಸಿಕೊಂಡು ತಲಾ ₹50 ಪ್ರತಿ ತಿಂಗಳು ವಂತಿಗೆ ಸಂಗ್ರಹಿಸುವ ಮೂಲಕ ಉತ್ತಮ ನಿರ್ವಹಣೆ ಮಾಡಬಹುದು’ ಎಂದು ಕ್ರೀಡಾ ಪ್ರೇಮಿ ವೆಂಕಟರಾವ್ ನಾಡಗೌಡ ಹೇಳುತ್ತಾರೆ.

ಸಹಕಾರ: ಯಮನೇಶ ಗೌಡಗೇರಾ, ಪ್ರಕಾಶ ಮಸ್ಕಿ, ಬಸವರಾಜ ನಂದಿಕೋಲಮಠ, ಬಸವರಾಜ ಭೋಗಾವತಿ, ಡಿ.ಎಚ್‌.ಕಂಬಳಿ, ಪಿ.ಕೃಷ್ಣ ಸಿರವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.