ADVERTISEMENT

ಕಪಗಲ್‌ನಲ್ಲಿ ಎತ್ತುಗಳ ಸಾಹಸ: 10 ತಾಸಿನಲ್ಲಿ 20 ಎಕರೆ ಜಮೀನು ಉಳುಮೆ

ಎತ್ತುಗಳ ಸಾಹಸಕ್ಕೆ ಗ್ರಾಮಸ್ಥರ ಮೆಚ್ಚುಗೆ, ರೈತರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 12:32 IST
Last Updated 1 ಸೆಪ್ಟೆಂಬರ್ 2021, 12:32 IST
ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದಲ್ಲಿ 10 ತಾಸಿನಲ್ಲಿ 20 ಎಕರೆ ಹೊಲ ಉಳುಮೆ ಮಾಡಿದ ಎತ್ತುಗಳು
ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದಲ್ಲಿ 10 ತಾಸಿನಲ್ಲಿ 20 ಎಕರೆ ಹೊಲ ಉಳುಮೆ ಮಾಡಿದ ಎತ್ತುಗಳು   

ಕಪಗಲ್ (ಮಾನ್ವಿ): ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಉಸ್ಮಾನ ಸಾಬ್ ಸಾಹುಕಾರ ಇವರ ಜಮೀನಿನಲ್ಲಿ ರೈತರಾದ ಶಿವರಾಯ ಮಹಾದೇವ ಮತ್ತು ವಾಲೇಕರ್ ಮಹಾದೇವ ಅವರು ತಮ್ಮ ಎತ್ತುಗಳಿಂದ 10 ತಾಸಿನಲ್ಲಿ 20 ಎಕರೆ ಹತ್ತಿ ಹೊಲದಲ್ಲಿ ಉಳುಮೆ ಮಾಡಿ ಸಾಹಸ ಪ್ರದರ್ಶಿಸಿದ್ದಾರೆ.

ಬುಧವಾರ ನಸುಕಿನ ಜಾವ 3 ಗಂಟೆಗೆ ಎತ್ತುಗಳನ್ನು ಹೆಗಲುಗಟ್ಟಿದ ಈ ರೈತರು ಮಧ್ಯಾಹ್ನ 1ಗಂಟೆವರೆಗೆ ಜಮೀನು ಹದ ಮಾಡಿ 20 ಎಕರೆಯನ್ನು ಪೂರ್ಣಗೊಳಿಸಿದ್ದಾರೆ. ಈ ಹಿಂದೆ ತಾಲ್ಲೂಕಿನ ದದ್ದಲ ಗ್ರಾಮದ ರೈತ ಗುರುಪುತ್ರಪ್ಪ 10 ಗಂಟೆಯಲ್ಲಿ 16 ಎಕರೆ ಹತ್ತಿ ಹೊಲ ಉಳುಮೆ ಮಾಡಿದ್ದು ದಾಖಲೆಯಾಗಿತ್ತು.

ಈಗ ಕಪಗಲ್ ಗ್ರಾಮದ ಶಿವರಾಯ ಮಹಾದೇವ ಮತ್ತು ಮಹಾದೇವ ವಾಲೇಕಾರ್ ಅವರು 10 ತಾಸಿನ ಅವಧಿಯಲ್ಲಿ 20 ಎಕರೆ ಉಳುಮೆ ಮಾಡಿ ದಾಖಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ADVERTISEMENT

ಜಮೀನು ಉಳುಮೆ ಮಾಡುವ ಸಂದರ್ಭದಲ್ಲಿ ಜಮೀನಿನ ಮಾಲೀಕ ಉಸ್ಮಾನ್ ಸಾಬ್ ಸಾಹುಕಾರ ಮತ್ತು ಗ್ರಾಮಸ್ಥರು ಹಾಜರಿದ್ದರು.

ಸನ್ಮಾನ: ಎತ್ತಗಳ ಮಾಲೀಕರಾದ ಶಿವರಾಯ ಮಹಾದೇವ ಮತ್ತು ಮಹಾದೇವ ವಾಲೇಕಾರ್ ಅವರಿಗೆ ಮುಸ್ತಫಾ ಸಾಹುಕಾರ ಅವರು ತಲಾ 5 ತೊಲೆ ಬೆಳ್ಳಿ ಕಡಗ ನೀಡಿದರು. ಗ್ರಾಮದ ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಉತ್ತರಬೂಪ ಮಹಾದೇವ ಅವರು ಎತ್ತುಗಳ ಮಾಲೀಕರಿಗೆ ₹ 5 ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಿದರು.

ನಂತರ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ನಡೆಯಿತು. ಗ್ರಾ.ಪಂ ಅಧ್ಯಕ್ಷ ನಾಗನಗೌಡ ಬೊಮ್ಮನಾಳ, ಗ್ರಾಮದ ಮುಖಂಡರಾದ ಉಸ್ಮಾನ್ ಸಾಬ್ ಸಾಹುಕಾರ, ಇಸ್ಮಾಯಿಲ್ ಸಾಹುಕಾರ್, ಗೋವಿಂದಪ್ಪ ನಾಯಕ, ಕರಿಯಪ್ಪ ಮುರುಗಟ್ಟು, ಯಲ್ಲಯ್ಯ ನಾಯಕ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.