ADVERTISEMENT

ರಾಯಚೂರು: ಡಿ.ರಾಂಪೂರ; ಬೋನಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 7:05 IST
Last Updated 13 ಜುಲೈ 2025, 7:05 IST
<div class="paragraphs"><p>ರಾಯಚೂರು ತಾಲ್ಲೂಕಿನ ಡಿ.ರಾಂಪೂರ ಗ್ರಾಮದ ಬೆಟ್ಟ ಪ್ರದೇಶದಲ್ಲಿ ಇಡಲಾಗಿದ್ದ ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು</p><p></p></div>

ರಾಯಚೂರು ತಾಲ್ಲೂಕಿನ ಡಿ.ರಾಂಪೂರ ಗ್ರಾಮದ ಬೆಟ್ಟ ಪ್ರದೇಶದಲ್ಲಿ ಇಡಲಾಗಿದ್ದ ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿದರು

   

ರಾಯಚೂರು: ತಾಲ್ಲೂಕಿನ ಡಿ.ರಾಂಪುರ ಗ್ರಾಮದ ಪರಮೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದೂವರೆ ತಿಂಗಳಿಂದ ಅಲೆದಾಡಿ ಕುರಿಗಳನ್ನು ಹೊತ್ತೊಯ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಭಾನುವಾರ ಬೆಳಗಿನ ಜಾವ ಬೋನಿಗೆ ಬಿದ್ದಿದೆ.

ADVERTISEMENT

ಚಿರತೆ ಮೇ 20ರಂದು ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡಿತ್ತು. ಬೀದಿ ನಾಯಿಗಳು ಹಾಗೂ ಬೆಟ್ಟದಲ್ಲಿ ನವಿಲು ತಿಂದು ಪರಮೇಶ್ವರ ಬೆಟ್ಟದ ಬಂಡೆಗಳ ಮಧ್ಯೆ ನೆಲೆಯೂರಿತ್ತು.

ಚಿರತೆ ಆಹಾರ ಹುಡುಕುತ್ತ ಗ್ರಾಮದ ಅಂಚಿನಲ್ಲಿರುವ ಕಾವಲಿ ಅಶೋಕ ಮನೆಯ ಕೊಟ್ಟಿಗೆಯಲ್ಲಿ ಕಟ್ಟಲಾದ ದನಗಳ ವಾಸನೆಯ ಜಾಡು ಹಿಡಿದು ಮನೆಯ ಬಾಗಿಲ ವರೆಗೂ ಬಂದು ಹೋಗಿತ್ತು. ನಂತರ ಗುಡಿಸಲೊಂದರ ಚಾವಣಿ ಮೇಲಿಂದ ಒಳಗೆ ಬಂದು ಎರಡು ಕುರಿಗಳನ್ನು ಹೊತ್ತೊಯ್ದಿತ್ತು.

ದನಗಾಯಿಗಳು ಹಾಗೂ ಕುರಿಗಾರರು ದನಕರುಗಳನ್ನು ಮೇಯಿಸಲು ಗುಡ್ಡ ಪ್ರದೇಶಕ್ಕೆ ಹೋಗುವುದು ಹಾಗೂ ಜಾನುವಾರುಗಳಿಗೆ ಮೇವು ತರಲು ಹೋಗುವುದು ಸಹ ಕಷ್ಟವಾಗಿತ್ತು. ಜನ ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದರು.

ಗ್ರಾಮಸ್ಥರು ಡ್ರೋನ್‌ ಕ್ಯಾಮೆರಾದಿಂದ ಬೆಟ್ಟದ ಮೇಲೆ ವೀಕ್ಷಣೆ ಮಾಡಿದಾಗ ಚಿರತೆ ಬಂಡೆ ಗಲ್ಲಿನ ಮೇಲೆ ಕುಳಿತಿರುವುದು ಕಂಡು ಬಂದಿತ್ತು. ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿಪತ್ರಗಳನ್ನು ಸಲ್ಲಿಸಿದ್ದರು.

‘ಎರಡೂವರೆ ಮೂರು ವರ್ಷದ ಚಿರತೆ ಪರಮೇಶ್ವರ ಬೆಟ್ಟದಲ್ಲಿ ಬಂಡೆಗಲ್ಲಿನ ಮಧ್ಯೆ ನೆಲೆಯೂರಿತ್ತು. ತಿಂಗಳ ಹಿಂದೆಯೇ ಗ್ರಾಮದಲ್ಲಿ ಚಿರತೆ ಹಿಡಿಯಲು ಎರಡು ಬೋನುಗಳನ್ನು ಇಡಲಾಗಿತ್ತು. ಅದು ಪ್ರತಿಬಾರಿಯೂ ತಪ್ಪಿಸಿಕೊಂಡು ಹೋಗುತ್ತಿತ್ತು. ಭಾನುವಾರ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ‘ ಎಂದು ಆರ್‌ಎಫ್‌ಒ ರಾಜೇಶ ನಾಯಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.