
ಲಿಂಗಸುಗೂರು: ಹಲವು ನಗರ ಹಾಗೂ ಪಟ್ಟಣಗಳಿಗೆ ತೆರಳಲು ಕೇಂದ್ರವಾಗಿರುವ ಪಟ್ಟಣದ ಬಸ್ ನಿಲ್ದಾಣ ಅವ್ಯವಸ್ಥೆಯ ತಾಣವಾಗಿದೆ.
ಬೆಂಗಳೂರು, ಗೋವಾ, ಹುಬ್ಬಳ್ಳಿ, ಕಲಬುರಗಿ, ಹೈದರಾಬಾದ್ ಸೇರಿದಂತೆ ಇತರ ನಗರಗಳಿಗೆ ತೆರಳಲು ಪಟ್ಟಣದ ಬಸ್ ನಿಲ್ದಾಣ ಕೇಂದ್ರ ಸ್ಥಾನವಾಗಿದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.
ದಾರಿಯೇ ಇಲ್ಲ: ಪಟ್ಟಣದ ಬಸ್ ನಿಲ್ದಾಣಕ್ಕೆ ಪ್ರಯಾಣಿಕರಿಗೆ 2 ಕಿರುದಾರಿ ಮಾಡಲಾಗಿದೆ. ಆ ದಾರಿಗೆ ಅಡ್ಡಲಾಗಿ ಬೈಕ್‌ಗಳನ್ನು ನಿಲ್ಲಿಸುತ್ತಿರುವುದರಿಂದ ಹಾಗೂ ನಿಲ್ದಾಣದ ಕಾಂಪೌಂಡ್‌ಗೆ ಹೊಂದಿಕೊಂಡೇ ಹೊರಗಡೆ ಬೀದಿಬದಿ ವ್ಯಾಪಾರಿಗಳು ದಾರಿ ಕಾಣದಂತೆ ವ್ಯಾಪಾರ ಮಾಡುತ್ತಿರುವ ಕಾರಣ ಪ್ರಯಾಣಿಕರು ಅನಿವಾರ್ಯವಾಗಿ ಬಸ್ ಬಂದು ಹೋಗುವ ದಾರಿಯಲ್ಲಿಯೇ ತಿರುಗಾಡಬೇಕಾಗಿದೆ. ಇದು ಅನಾಹುತಗಳಿಗೆ ಕಾರಣವಾಗಿದೆ.
ಬಸ್ ನಿಲ್ದಾಣದ ಶೌಚಾಲಯದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಕೆಲವರು ಬಸ್ ನಿಲ್ದಾಣದ ಎಲ್ಲೆಂದರಲ್ಲಿ ಮೂತ್ರ ಮತ್ತು ಬಹಿರ್ದೆಸೆ ಮಾಡುತ್ತಿರುವುದರಿಂದ ಇಡೀ ಬಸ್ ನಿಲ್ದಾಣ ದುರ್ವಾಸನೆ ಬೀರುತ್ತಿದೆ.
ಬಸ್ ನಿಲ್ದಾಣದೊಳಗೆ ಕೆಲವರಿಗೆ ಡಬ್ಬಾ ಅಂಗಡಿಗಳನ್ನು ಇಡಲು ಸಂಸ್ಥೆ ಅನುಮತಿ ನೀಡಿದೆ. ಆದರೆ, ಡಬ್ಬಾ ಅಂಗಡಿಗಳಲ್ಲಿ ಪ್ರಯಾಣಿಕರು ವಸ್ತುಗಳನ್ನು ಖರೀದಿಸಿಕೊಂಡು ಬಸ್ ಹತ್ತುವ ಭರದಲ್ಲಿ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಡಬ್ಬಾ ಅಂಗಡಿ ತೆರವುಗೊಳಿಸಿ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗಿರುವ ಮಳಿಗೆಗಳಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.
ಇತ್ತೀಚೆಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಪಾಟೀಲ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ನಿಲ್ದಾಣದ ಮುಂದಿನ ಕಾಂಪೌಂಡ್ ಗೋಡೆ ತೆಗೆದು ಪ್ರಯಾಣಿಕರಿಗೆ ದಾರಿ ಮಾಡಿಕೊಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಇಲ್ಲಿಯವರೆಗೂ ಆದೇಶ ಪಾಲನೆಯಾಗಿಲ್ಲ.
ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಸರಿಯಾದ ದಾರಿ ಇಲ್ಲ. ಆ ಸಮಸ್ಯೆಯನ್ನು ಕೂಡಲೇ ಪರಿಹರಿಸ ಲಾಗುವುದು. ಇತರ ಸಮಸ್ಯೆಗಳ ಪರಿಹಾರಕ್ಕೂ ಆದ್ಯತೆ ನೀಡಲಾಗುವುದುಪ್ರಕಾಶ ದೊಡ್ಡಮನಿ ಬಸ್ ಘಟಕದ ವ್ಯವಸ್ಥಾಪಕ ಲಿಂಗಸುಗೂರು
ಪಟ್ಟಣದ ಬಸ್ ನಿಲ್ದಾಣಕ್ಕೆ ಹೋಗುವ ದಾರಿಗೆ ಅಡ್ಡಲಾಗಿ ಡಬ್ಬಾ ಅಂಗಡಿಗಳನ್ನು ಇಟ್ಟಿರುವುದು ಹಾಗೂ ಬೈಕ್‌ಗಳನ್ನು ನಿಲ್ಲಿಸುತ್ತಿರುವ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆಹನುಮಂತ ನಾಯಕ ಅಧ್ಯಕ್ಷ ಜಯ ಕರ್ನಾಟಕ ರಕ್ಷಣಾ ಸೇನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.