ADVERTISEMENT

ಲಿಂಗಸುಗೂರು: ‘ಸಾಮೂಹಿಕ ವಿವಾಹ ಜೀವನಕ್ಕೆ ಆದರ್ಶ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:47 IST
Last Updated 3 ಡಿಸೆಂಬರ್ 2025, 6:47 IST
ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮದಲ್ಲಿ ಸಾಮೂಹಿಕ ವಿವಾಹ ಹಾಗೂ ಆದಿದೈವ ಕುಪ್ಪಿಭೀಮ ಕೃತಿ ಬಿಡುಗಡೆ ಸಮಾರಂಭವನ್ನು ಶಾಸಕ ಮಾನಪ್ಪ ವಜ್ಜಲ್ ಉದ್ಘಾಟಿಸಿದರು 
ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮದಲ್ಲಿ ಸಾಮೂಹಿಕ ವಿವಾಹ ಹಾಗೂ ಆದಿದೈವ ಕುಪ್ಪಿಭೀಮ ಕೃತಿ ಬಿಡುಗಡೆ ಸಮಾರಂಭವನ್ನು ಶಾಸಕ ಮಾನಪ್ಪ ವಜ್ಜಲ್ ಉದ್ಘಾಟಿಸಿದರು    

ಲಿಂಗಸುಗೂರು: ‘ದುಂದು ವೆಚ್ಚ ಮಾಡಿ ವಿವಾಹವಾಗುವ ಬದಲು ಸಾಮೂಹಿಕ ವಿವಾಹವಾದರೆ ಜೀವನ ಆದರ್ಶಮಯವಾಗಿರುತ್ತದೆ’ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಹೇಳಿದರು.

ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮದಲ್ಲಿ ಕುಪ್ಪಿಭೀಮ ದೇವರ ಮಹಾರಥ ಶತಮಾನೋತ್ಸವ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ಆದಿದೈವ ಕುಪ್ಪಿಭೀಮ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅನಗತ್ಯ ಹಣ ವ್ಯರ್ಥ ಮಾಡಿ ಆರ್ಥಿಕ ಸಂಕಷ್ಟ ಅನುಭವಿಸಬಾರದು ಎಂಬ ಉದ್ದೇಶದಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಮಠಮಾನ್ಯಗಳಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗುತ್ತಿದೆ. ಪವಿತ್ರವಾದ ಧಾರ್ಮಿಕ ಕ್ಷೇತ್ರಗಳಲ್ಲಿ ಸಹಸ್ರಾರು ಭಕ್ತರ ಮತ್ತು ಮಠಾಧೀಶರ ಆಶೀರ್ವಾದದೊಂದಿಗೆ ಸಾಮೂಹಿಕ ವಿವಾಹ ಬಂಧನಕ್ಕೊಳಗಾಗುವ ಭಾಗ್ಯ ಜೀವನದ ಸಾರ್ಥಕತೆಯ ಕ್ಷಣವಾಗಿದೆ’ ಎಂದರು.

ADVERTISEMENT

‘ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಮೂಲ ಸೌಕರ್ಯಗಳಿಗಾಗಿ ಮುಖ್ಯಮಂತ್ರಿ ₹25 ಕೋಟಿ ರೂಪಾಯಿ ಬಿಡುಗಡೆಗೊಳಿಸಿದ್ದಾರೆ. ಅತಿವೃಷ್ಠಿಯಿಂದ ಜಿಲ್ಲೆಯಲ್ಲಿ ಹಾಳಾಗಿರುವ ಬೆಳೆಗಳಿಗೆ ಈಗಾಗಲೇ ಜಿಲ್ಲೆಗೆ ₹36 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ರೈತರ ಪರ ಕಾಳಜಿ ಇರುವ ಸರ್ಕಾರ ನಮ್ಮದಾಗಿದೆ’ ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಮಾನಪ್ಪ ವಜ್ಜಲ್, ‘ಕುಪ್ಪಿಭೀಮ ದೇವರ ಮಹಾರಥಕ್ಕೆ 100 ವರ್ಷ ತುಂಬಿದೆ. ಇಂತಹ ಸಂದರ್ಭದಲ್ಲಿ ವಿವಾಹವಾಗುತ್ತಿರುವ ಜೋಡಿಗಳಿಗೆ ಪುಣ್ಯದ ಕ್ಷಣವಾಗಿದೆ. ಸರ್ಕಾರ ಇತರೆ ಸಮುದಾಯಗಳಿಗೆ ಶಾದಿ ಭಾಗ್ಯ ನೀಡಿದಂತೆ ಹಿಂದೂಗಳು ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವ ಜೋಡಿಗಳಿಗೆ ₹50 ಸಾವಿರ ರೂಪಾಯಿ ಪೋತ್ಸಾಹ ಧನ ನೀಡಬೇಕು’ ಎಂದರು.

ಸಮಾರಂಭದಲ್ಲಿ 26 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿರ್ದೇಶಕ ಅಮರೇಶ ಯತಗಲ್ ರಚಿಸಿದ ಆದಿದೈವ ಕುಪ್ಪಿಭೀಮ ಕೃತಿ ಬಿಡುಗಡೆಗೊಳಿಸಲಾಯಿತು.

ವಣಬಳ್ಳಾರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಅಭಿನವ ಗಜದಂಡ ಶಿವಾಚಾರ್ಯರು, ವರರುದ್ರಮುನಿ ಸ್ವಾಮೀಜಿ, ವರದಾನೇಶ್ವರ ಸ್ವಾಮೀಜಿ, ಶಿವಣ್ಣ ತಾತಾ, ಹುನುಕುಂಟಿ ಶರಣಯ್ಯ ತಾತಾ, ಹುಲಗಪ್ಪ ಪೂಜಾರಿ, ಅಯ್ಯಣ್ಣ ತಾತ, ಸೈಯದ್ ಮುಜಾಮಿಲ್ ಖಾದ್ರಿ, ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ಮಾಜಿ ಸಂಸದರಾದ ರಾಜಾ ಅಮರೇಶ್ವರ ನಾಯಕ, ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪುರ, ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಡಿ.ಎಸ್ ಹೂಲಗೇರಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಪಾಮಯ್ಯ ಮುರಾರಿ, ಮಸ್ಕಿ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ಮುಖಂಡರಾದ ಸಿದ್ಧನಗೌಡ ಪಾಟೀಲ್, ಅಮರಗುಂಡಪ್ಪ ಮೇಟಿ, ಬಸವಂತರಾಯ ಕುರಿ, ಶರಣಪ್ಪ ಮೇಟಿ, ಶ್ರೀನಿವಾಸ ಅಮ್ಮಾಪುರ, ರಾಜ ಶ್ರೀನಿವಾಸ ನಾಯಕ, ರಾಜ ಸೋಮನಾಥ್ ನಾಯಕ, ಕೆ.ಶಾಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಬಾಬುರೆಡ್ಡಿ ಮುನ್ನೂರು ಹಾಗೂ ಇನ್ನಿತರರಿದ್ದರು. 

ಕಸಬಾಲಿಂಗಸುಗೂರು ಗ್ರಾಮದಲ್ಲಿ ಕುಪ್ಪಿಭೀಮ ದೇವರ ಮಹಾರಥದ ಶತಮಾನೋತ್ಸವ ಪ್ರಯುಕ್ತ ನಡೆದ ಸಾಮೂಹಿಕ ವಿವಾಹದಲ್ಲಿ 26 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.