ADVERTISEMENT

ಲಿಂಗಸುಗೂರು| ಕಾರ್ಪೊರೇಟ್ ಪರ ಕಾಯ್ದೆಗಳಿಂದ ರೈತರಿಗೆ ಮರಣ ಶಾಸನ: ಡಿ.ಎಚ್.ಪೂಜಾರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 4:40 IST
Last Updated 21 ಜನವರಿ 2026, 4:40 IST
ಲಿಂಗಸುಗೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರೈತ ಸಂಘ (ಎಐಯುಕೆಎಸ್)ದ ಜಿಲ್ಲಾ 8ನೇ ಸಮ್ಮೇಳನವನ್ನು ಸಂಘದ ರಾಜ್ಯ ಸಮಿತಿ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಉದ್ಘಾಟಿಸಿದರು
ಲಿಂಗಸುಗೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರೈತ ಸಂಘ (ಎಐಯುಕೆಎಸ್)ದ ಜಿಲ್ಲಾ 8ನೇ ಸಮ್ಮೇಳನವನ್ನು ಸಂಘದ ರಾಜ್ಯ ಸಮಿತಿ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಉದ್ಘಾಟಿಸಿದರು   

ಲಿಂಗಸುಗೂರು: ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸುವ ಮೂಲಕ ಕೇಂದ್ರ ಸರ್ಕಾರ ರೈತರ ಮರಣಶಾಸನ ಬರೆದಿದೆ ಎಂದು ಸಿಪಿಐ(ಎಂಎಲ್) ಮಾಸ್ ಲೈನ್ ರಾಜ್ಯ ಸಮಿತಿ ಕಾರ್ಯದರ್ಶಿ ಡಿ.ಎಚ್.ಪೂಜಾರ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ರೈತ ಸಂಘ(ಎಐಯುಕೆಎಸ್)ದ ಜಿಲ್ಲಾ 8ನೇ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘50 ವರ್ಷಗಳಿಂದ ಕಂಡಿರದಂತಹ ಅತಿಯಾದ ಮಳೆಯಿಂದ ಬೆಳೆ ನಷ್ಟವಾಗಿ, ರೈತರು ತೀವ್ರ ಸಂಕಷ್ಟದಲಿದ್ದರೂ ಸರ್ಕಾರ ಸ್ಪಂದನೆ ಮಾಡುತ್ತಿಲ್ಲ. ಬೆಳೆ ನಷ್ಟ ಪರಿಹಾರದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಪರಿಹಾರದ ಅರ್ಧದಷ್ಟು ಲಂಚ ಕೊಟ್ಟವರಿಗೆ ಪರಿಹಾರ ದೊರೆತ್ತಿದೆ. ಅಧಿಕಾರಿಗಳು ರೈತರ ಹೊಲ ಗದ್ದೆಗಗಳಿಗೆ ತೆರಳದೆ ತಮ್ಮ ಏಜೆಂಟರು ತಯಾರಿಸಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅಧಿಕಾರಿಗಳ ಇಂತಹ ಹುಚ್ಚಾಟದಿಂದ ರೈತ ಕುಟುಂಬಗಳು ಪರಿಹಾರದಿಂದ ವಂಚನೆಗೊಂಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ಬೆಳೆ ಕಟಾವಿಗೆ ಮುಂಚೆ ಖರೀದಿ ಕೇಂದ್ರ ತೆರೆಯದ ಕಾರಣ, ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಅರ್ಥ ಕಳೆದುಕೊಂಡಿದೆ. ಈ ಹಂಗಾಮಿನ ಭತ್ತ, ಹತ್ತಿ, ತೊಗರಿ, ಮೆಕ್ಕೆಜೋಳ, ಕಡಲೆ, ಸಜ್ಜೆ, ಹೆಸರು ಇತರೆ ಬೆಳೆ ಬೆಳೆಯಲು ಖರ್ಚು ಮಾಡಿದ ಹಣ ಕೂಡ ರೈತರಿಗೆ ದೊರೆಯುವುದಿಲ್ಲ. ವಿದೇಶದಿಂದ ಸಕ್ಕರೆ ಮತ್ತು ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ಈರುಳ್ಳಿ ಬೆಳೆದ ರೈತರು ಸಂಪೂರ್ಣ ನಷ್ಟಕ್ಕೊಳಗಾಗಿದ್ದಾರೆ. ಪಂಚಾಯತಿಗೊಂದು ಕೋಲ್ಡ್ ಸ್ಟೋರೇಜ್ ಗೋಡಾನಗಳನ್ನು ನಿರ್ಮಿಸಿದರೆ, ಈರುಳ್ಳಿ ಇತರೆ ತರಕಾರಿ ಹಣ್ಣು ಬೆಳೆಗಾರರನ್ನು ನಷ್ಟದಿಂದ ತಪ್ಪಿಸಬಹುದು. ಆದರೆ, ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳಿಗೊಪ್ಪಿಸುವ ಕಾಯ್ದೆಗಳನ್ನು ಜಾರಿಗೊಸಿದ್ದರಿಂದ ರೈತರಿಗೆ ಮರಣ ಶಾಸನ ಬರೆಯುತ್ತಿದೆ’ ಎಂದು ಹೇಳಿದರು.

ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಸಮ್ಮೇಳನ ಉದ್ಘಾಟಿಸಿದರು. ಸಿಪಿಐಎಂಎಲ್ ರೆಡ್ ಫ್ಲ್ಯಾಗ್ ರಾಜ್ಯ ಕಾರ್ಯದರ್ಶಿ ಬಿ.ಬಸವಲಿಂಗಪ್ಪ, ಶೇಖರಯ್ಯ ಗೆಜ್ಜಲಗಟ್ಟಾ ಮಾತನಾಡಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಅಶೋಕ ನಿಲೋಗಲ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ, ಚಿಟ್ಟಿ ಬಾಬು, ರಮೇಶ ಪಾಟೀಲ, ಮಹಿಳಾ ಸಂಪದ ರೇಣುಕಾ, ಮಾರಿಯಮ್ಮ ಬಸಾಪುರ, ದ್ಯಾಮಮ್ಮ ಗುಂತುಗೋಳ, ಶಿವರಾಜ ದೊಡ್ಡಿ, ಗೌಸಖಾನ ಗುಂತುಗೋಳ, ಯಲ್ಲಪ್ಪ ರಾಯದುರ್ಗ, ಹುಲಿಗಪ್ಪ ಶಿರವಾರ. ಹನುಮಂತ ಶಿರವಾರ, ವೀರೇಶ ನಾಯಕ, ಯಮನೂರಪ್ಪ ಮಸ್ಕಿ, ಛತ್ರಿ ಗೌಡ, ಬಸವನಗೌಡ ಮಾಂಪೂರ ಇನ್ನಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.