
ಲಿಂಗಸುಗೂರು: ಪಟ್ಟಣದಲ್ಲಿರುವ ಕೃಷಿ ಉಪ ನಿರ್ದೇಶಕರ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರ ಕೈಬಿಡುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕೃಷಿ ಇಲಾಖೆ ಕಚೇರಿ ಎದುರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಧರಣಿ ಸತ್ಯಾಗ್ರಹದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರ ಜಾಗಿರನಂದಿಹಾಳ ಮಾತನಾಡಿ, ಹೆಚ್ಚು ಕೃಷಿ ಭೂಮಿ ಹೊಂದಿದೆ ಎಂಬ ಸುಳ್ಳು ಮಾಹಿತಿ ನೀಡಿ ಕೃಷಿ ಉಪ ನಿರ್ದೇಶಕ-2 ಕಚೇರಿಯನ್ನು ಹುದ್ದೆಗಳ ಸಹಿತವಾಗಿ ಸಿಂಧನೂರಿಗೆ ಸ್ಥಳಾಂತರ ಮಾಡುವಂತೆ 2024 ಆಗಸ್ಟ್ 19ರಂದು ಕೃಷಿ ಇಲಾಖೆ ಅಧೀನ ಕಾರ್ಯದರ್ಶಿ ರಾಯಚೂರಿನ ಜಂಟಿ ಕೃಷಿ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಆದರೆ ಹೋರಾಟ ಫಲವಾಗಿ ಕಚೇರಿ ಸ್ಥಳಾಂತರ ಪ್ರಕ್ರೀಯೆ ಕೈಬಿಡಲಾಗಿತ್ತು. ಜುಲೈ 11ರಂದು ಮತ್ತೆ ಕೃಷಿ ಇಲಾಖೆ ಆಯುಕ್ತರ ಕಚೇರಿಯಿಂದ ಸ್ಥಳಾಂತರ ಮಾಡುವಂತೆ ಮತ್ತೆ ಪತ್ರ ಬರೆಯಲಾಗಿದೆ ಇದು ಖಂಡನೀಯ’ ಎಂದರು.
ಕೃಷಿ ಉಪ ನಿರ್ದೇಶಕರ ಕಚೇರಿಗೆ ಸ್ವಂತ ಕಟ್ಟಡ ಇದೆ ಹಾಗೂ ಯಾವುದೇ ತೊಂದರೆ ಇಲ್ಲದೆ ಕಚೇರಿ ಸುಲಲಿತವಾಗಿ ನಡೆಯುತ್ತಿದ್ದರೂ ಸಿಂಧನೂರಿಗೆ ಸ್ಥಳಾಂತರ ಮಾಡುವಂತೆ ಪದೇ ಪದೇ ಪತ್ರ ಬರೆಯುತ್ತಿರುವುದು ಹಾಗೂ ಇದಕ್ಕೆ ಸಿಂಧನೂರಿನ ಚುನಾಯಿತ ಪ್ರತಿನಿಧಿಗಳು ಒತ್ತಡ ಹಾಕುತ್ತಿರುವುದು ಸರಿಯಲ್ಲ. ಇಲ್ಲಿನ ಕಚೇರಿಗಳನ್ನು ಕಸಿಯುವ ಪ್ರಯತ್ನ ಅಲ್ಲಿನ ರಾಜಕಾರಣಿ ಕೈಬಿಡಬೇಕು’ ಎಂದು ಆಗ್ರಹಿಸಿದರು.
ಬಸಣ್ಣ ಕೋಠಾ, ಲಾಲಸಾಬ, ಬಸವರಾಜ ಗೋಸ್ಲೆ, ಮಹ್ಮದ ಖಾಜಾಸಾಬ, ದುರಗಪ್ಪ, ಮಹಾಂತೇಶ, ಸದಾನಂದ ಮಡಿವಾಳ, ರಮೇಶ, ಲಕ್ಷ್ಮಣ ಮುಕ್ಕಣ, ಹನುಮಗೌಡ, ನಾಗಪ್ಪ, ಸಿದ್ದಪ್ಪ, ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.