
ಲಿಂಗಸುಗೂರು: ‘ಪುಸ್ತಕಗಳ ಮೂಲಕ ಓದುವ ಸಂಸ್ಕೃತಿ ಉಳಿಸಬೇಕು. ಪುಸ್ತಕ ಸಂಸ್ಕೃತಿ ಉಳಿದರೆ ಮಾತ್ರ ಸೃಜನಶೀಲ ಬದುಕು ಉಳಿಯಲು ಸಾಧ್ಯ’ ಎಂದು ಕತೆಗಾರ ಶರಣಬಸವ ಕೆ.ಗುಡದಿನ್ನಿ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಜಿಲ್ಲಾ ಜಾಗೃತಿ ಸಮಿತಿಯ ಸಹಯೋಗದಲ್ಲಿ ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಶಿಕ್ಷಕ ಹುಲಪ್ಪ ವಣಕಿಹಾಳ ಮನೆಯಲ್ಲಿ ಭಾನುವಾರ ನಡೆದ ಮನೆಗೊಂದು ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಹುಲಪ್ಪ ವಣಕಿಹಾಳ ಅವರ ‘ಧರೆಯ ನಕ್ಷತ್ರಗಳು’ ದ್ವಿಪದಿಗಳ ಅದ್ಭುತ ಪುಸ್ತಕವಾಗಿದ್ದು, ಸಮಾಜದ ಓರೆಕೋರೆಗಳನ್ನು ಗುರುತಿಸುವಲ್ಲಿ ಮತ್ತು ತಿದ್ದುವಲ್ಲಿ ಈ ಪುಸ್ತಕದ ಸಾಲುಗಳು ಮುಲಾಮಿನಂತೆ ಕೆಲಸ ಮಾಡುತ್ತವೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಶಶಿಕಾಂತ ಕಾಡ್ಲೂರು ಮಾತನಾಡಿ,‘ಜಗತ್ತನ್ನು ಆಳುವುದು ದುಡ್ಡು, ಮದ್ದು–ಗುಂಡುಗಳಲ್ಲ ಜ್ಞಾನ. ಆ ಜ್ಞಾನದ ಬೆಳವಣಿಗೆಗೆ ಗ್ರಂಥಾಲಯಗಳು ಹುಟ್ಟಬೇಕು. ಹೊಸ ತಲೆಮಾರನ್ನು ಓದಿನ ಕಡೆಗೆ ತಿರುಗಿಸಬೇಕು’ ಎಂದು ಹೇಳಿದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಗುಂಡುರಾವ ದೇಸಾಯಿ, ಚಂದ್ರಶೇಖರ ರಕ್ಕಸಗಿ, ಮುಕ್ತುಂಸಾಬ್ ತಾಳಿಕೋಟಿ, ಬಸವರಾಜ ಮ್ಯಾಗೇರಿ, ದೇವೇಂದ್ರಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.