ADVERTISEMENT

ಸಾಹಿತ್ಯ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಾಸನ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಬಿ.ಎಂ.ಶರಭೇಂದ್ರಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 14:46 IST
Last Updated 1 ಜುಲೈ 2022, 14:46 IST
ರಾಯಚೂರಿನ ಎಸ್ಎಸ್ಆರ್ ಜಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ಕನ್ನಡ ಸಾಹಿತ್ಯ ಸಿರಿ ದರ್ಪಣ ಮತ್ತು ಸಾಧಕರ ಚಿತ್ರ ಚಂದ್ರಶಾಲೆ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.
ರಾಯಚೂರಿನ ಎಸ್ಎಸ್ಆರ್ ಜಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ಕನ್ನಡ ಸಾಹಿತ್ಯ ಸಿರಿ ದರ್ಪಣ ಮತ್ತು ಸಾಧಕರ ಚಿತ್ರ ಚಂದ್ರಶಾಲೆ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.   

ರಾಯಚೂರು: ವಿದ್ಯಾರ್ಥಿಗಳು ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸಂವಾದ, ಚರ್ಚೆಯಿಂದ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ಪುಸ್ತಕಗಳನ್ನು ಓದುವ ಹಾವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಸಲಹೆ ನೀಡಿದರು.

ನಗರದ ಲೋಹಿಯಾ ಪ್ರತಿಷ್ಠಾನ, ಎಸ್ಎಸ್ಆರ್ ಜಿ ಮಹಿಳಾ ಕಾಲೇಜಿನ ಕನ್ನಡ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ‘ಕನ್ನಡ ಸಾಹಿತ್ಯ ಸಿರಿ ದರ್ಪಣ‘ ಮತ್ತು ‘ಸಾಧಕರ ಚಿತ್ರ ಚಂದ್ರಶಾಲೆ‘ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೆನಪುಗಳು ಬದುಕಿನ ಒಂದು ಭಾಗ. ಪ್ರತಿಯೊಬ್ಬರ ಬದುಕಿನಲ್ಲಿ ಅನಂದದ ಕ್ಷಣಗಳು, ಕುತೂಹಲಗಳು ನೆನಪಾದಾಗ ವಿಶೇಷ ಖುಷಿ ಆಗುತ್ತದೆ. ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ಸಾಧಕರ ಚಿತ್ರ ಚಂದ್ರ ಶಾಲೆ ಕೃತಿಯು ಜಿಲ್ಲೆಯ ಸಾಧಕರ ಬದುಕಿನ ನೆನಪು, ಖುಷಿಯ ಬಗ್ಗೆ ವಿವರಿಸುತ್ತದೆ. ಪ್ರತಿಯೊಂದು ನೆನಪುಗಳಿಗೆ ಇತಿಹಾಸವಿದೆ. ಈ ನೆಲದ ಇತಿಹಾಸ ತೆರೆಯುತ್ತದೆ. ಮುಕ್ಕುಂದಿಮಠ ಅವರು 80 ವರ್ಷ ದಾಟಿದರೂ ಬರವಣಿಗೆಯ ಮೂಲಕ ವಿಶೇಷವಾಗಿ ಗುರುತಿಸಿಕೊಂಡು ಅದ್ಭುತ ಕೃತಿಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ADVERTISEMENT

ಎಸ್ಎಸ್ಆರ್ ಜಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ರಾಜೇಶ್ವರಿ ಮಾತನಾಡಿ, ಸಾಹಿತ್ಯ ಚಲನಶೀಲತೆ, ಸಮಾಜದ ಸ್ವಾಸ್ಥ್ಯ ಕಾಪಾಡುತ್ತದೆ. ಜಿಲ್ಲೆಯೂ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತ ನಾಡಾಗಿದೆ. ಅನೇಕರು ಇಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಎಲ್ ವಿ ಡಿ ಕಾಲೇಜಿನ ಪ್ರಾಧ್ಯಾಪಕ ಚನ್ನಬಸವಯ್ಯ ಹಿರೇಮಠ ಮಾತನಾಡಿ, ಕವಿ, ಲೇಖಕರಿಗೆ ಸೃಜನಶೀಲತೆ, ವಿಮರ್ಶಾತ್ಮಕ ಹಾಗೂ ನೇರ ನಿಷ್ಠುರರಾಗಿ ಬರೆಯುವ ಎದೆಗಾರಿಕೆ ಇರಬೇಕು. ಬರಹಗಾರರು ಶಿಸ್ತು, ಸಂಯಮ, ತಾಳ್ಮೆ ಇಲ್ಲದಿದ್ದರೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲಾರರು. ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ಕೃತಿಯಲ್ಲಿ ಸಾಧಕರ ಕುರಿತ ನೆನಪುಗಳ ಬುತ್ತಿ ಸಾಗುತ್ತದೆ. ಇದು ವಿಶೇಷವಾದ ಅನುಭವ ನೀಡುತ್ತದೆ. ಅವರ ಕೃತಿಗಳಲ್ಲಿ ನಡುಗನ್ನಡ, ಹಳೆ ಗನ್ನಡ ವಿಸ್ತಾರವಿದೆ. ಎರಡನ್ನೂ ಸಮರ್ಥವಾಗಿವೆ ಎಂದು ತಿಳಿಸಿದರು.

ತಾರಾನಾಥ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಂದಾಪುರ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷೆ ಕೆ.ಗಿರಿಜಾ ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು.

ಕೃತಿಯ ಕರ್ತೃ ಪ್ರೊ.ಶಾಶ್ವತ ಸ್ವಾಮಿ ಮುಕ್ಕುಂದಿಮಠ, ಕಾಲೇಜಿನ ಪ್ರಾಚಾರ್ಯ ಸತ್ಯನಾರಾಯಣ, ಡಾ. ಜೆ.ಎಲ್. ಈರಣ್ಣ, ಭೀಮನಗೌಡ ಇಟಗಿ, ಭೀಮೋಜಿರಾವ್‌ ಜಗತಾಪ, ಜಿ. ಬಿರುಪಾಕ್ಷಪ್ಪ, ಡಾ. ಸುಗುಣಾ ಸಿದ್ದನಗೌಡ, ಶಿವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.