ADVERTISEMENT

ರಾಜಿಸಂಧಾನದಿಂದ ಪ್ರಕರಣಗಳ ಇತ್ಯರ್ಥ ಗುರಿ

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲಾ ನ್ಯಾಯಾಧೀಶ ಬೈಲೂರು ಶಂಕರರಾಮ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 13:32 IST
Last Updated 13 ಜುಲೈ 2019, 13:32 IST
ರಾಯಚೂರಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ ನ್ಯಾಯಾಧೀಶ ಬೈಲೂರು ಶಂಕರರಾಮ ಮಾತನಾಡಿದರು
ರಾಯಚೂರಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ ನ್ಯಾಯಾಧೀಶ ಬೈಲೂರು ಶಂಕರರಾಮ ಮಾತನಾಡಿದರು   

ರಾಯಚೂರು: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣದ ತ್ವರಿತ ವಿಚಾರಣೆಯ ಮೂಲಕ ನ್ಯಾಯ ಪಡೆಯುವುದು ಕಕ್ಷಿದಾರರ ಹಕ್ಕಾಗಿದೆ. ಕಕ್ಷಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲೋಕ ಅದಾಲತ್‌ ಮೂಲಕ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಮಾಡಲು ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ ನ್ಯಾಯಾಧೀಶ ಬೈಲೂರು ಶಂಕರರಾಮ ಹೇಳಿದರು.

ಜಿಲ್ಲಾ ನ್ಯಾಯಾಲಯದಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘದಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಕೇಂದ್ರದಲ್ಲಿ ಹಾಗೂ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಲೋಕ ಅದಾಲತ್‌ ನಡೆಸಲಾಗುತ್ತಿದ್ದು, ರಾಜೀ ಸಂಧಾನದ ಮೂಲಕ 4,752 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತಿದೆ. ಇದಕ್ಕೆ ವಕೀಲರ ಹಾಗೂ ಜನರ ಸಹಕಾರ ಅಗತ್ಯವಾಗಿದೆ ಎಂದರು.

ADVERTISEMENT

ಜಿಲ್ಲಾ ನ್ಯಾಯಾಲಯದಲ್ಲಿ ಲೋಕ ಅದಾಲತ್‌ಗಾಗಿ 10 ಬೆಂಚ್‌ಗಳನ್ನು ಮಾಡಲಾಗಿದೆ. ಆಯಾ ನ್ಯಾಯಾಲಯದ ಪ್ರಕರಣಗಳನ್ನು ಆಯಾ ಬೆಂಚ್‌ನಲ್ಲಿ ಇತ್ಯರ್ಥ ಮಾಡಲಾಗುತ್ತದೆ. ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಎರಡು ತಿಂಗಳಿನಿಂದ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಡಿಮೆ ವೆಚ್ಚದಲ್ಲಿ ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಲೋಕ ಅದಾಲತ್‌ ಸಹಕಾರಿಯಾಗಿದೆ. ಆದ್ದರಿಂದ ಸಂಧಾನಕಾರರಿಗೆ ತರಬೇತಿ ನೀಡಲಾಗಿದೆ. ಎರಡೂ ಕಡೆಯವರಿಗೆ ತಿಳಿವಳಿಕೆ ಮೂಡಿಸಿ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ. ಇದನ್ನು ಸದುಪಯೋಗಿ ಪಡಿಸಿಕೊಂಡು ಪ್ರಕರಣಗಳಿಂದ ಮುಕ್ತಿ ಪಡೆಯಬೇಕು ಎಂದರು.

ಮೋಟಾರು ವಾಹನ ಕಾಯ್ದೆ, ವೈವಾಹಿಕ, ಕ್ರಿಮಿನಲ್, ಬ್ಯಾಂಕ್ ಹಾಗೂ ವಿಮಾ ಕ್ಷೇತ್ರ ಸೇರಿದಂತೆ ರಾಜೀ ಆಗುವಂತಹ ಎಲ್ಲ ಬಗೆಯ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲಾಗುತ್ತದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ 32 ಸಾವಿರ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಪೊಲೀಸ್ ಇಲಾಖೆ, ವಕೀಲರು ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲರ ಸಹಕಾರ ಪ್ರಮುಖವಾಗಿದೆ ಎಂದರು.

ಹೆಚ್ಚುವರಿ ನ್ಯಾಯಾಧೀಶ ಮಸ್ತಫಾ, ಚಂದ್ರಶೇಖರ ರೆಡ್ಡಿ, ವಕೀಲರು ಹಾಗೂ ಕಕ್ಷಿದಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.