ರಾಯಚೂರು: ‘2007ರಿಂದ ಭಾರತೀಯ ಜನತಾ ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದು, ಈ ಬಾರಿ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಿದ್ದೇನೆ’ ಎಂದು ಮಾಜಿ ಶಾಸಕ ಗಂಗಾಧರ ನಾಯಕ ತಿಳಿಸಿದರು.
‘ಹಿಂದಿನ ಎರಡು ಅವಧಿಯ ವಿಧಾನಸಭೆ ಚುನಾವಣೆಗಳಲ್ಲೂ ಮಾನ್ವಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ಪಕ್ಷ ನನಗೆ ಟಿಕೆಟ್ ನೀಡಲಿಲ್ಲ. ಆದರೂ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದೇನೆ. ಮಾನ್ವಿಯಲ್ಲಿ ನಾನು ಸ್ಪರ್ಧಿಸಿದಾಗ ಕೇವಲ 2,130 ಮತಗಳಿಂದ ಪರಾಭವಗೊಂಡಿದ್ದೆ. ಬಿ.ಎಸ್.ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರ ಜತೆ ಹೋಗಿದ್ದೆ. ಮರಳಿ ಬಿಜೆಪಿ ಸೇರಿದ್ದೇನೆ. ಈ ಬಾರಿ ಪಕ್ಷ ನನಗೆ ಟಿಕೆಟ್ ನೀಡಿದಲ್ಲಿ ಸ್ಪರ್ಧಿಸುತ್ತೇನೆ’ ಎಂದು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
‘ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಕುರಿತು ನಡೆದ ಸಭೆಯಲ್ಲಿ ವೀಕ್ಷಕ ಶೈಲೇಂದ್ರ ಬೆಲ್ದಾಳೆ ಅವರಿಗೆ ನಾನು ಕೂಡ ಟಿಕೆಟ್ ಆಕಾಂಕ್ಷಿ ಎನ್ನುವ ವಿಚಾರ ತಿಳಿಸಿದ್ದೇನೆ. 2018ರಲ್ಲಿ ಟಿಕೆಟ್ ನೀಡಬೇಕಿತ್ತು. ಆಗ ಶರಣಪ್ಪ ಗುಡದಿನ್ನಿ ಅವರಿಗೆ ನೀಡಲಾಯಿತು. 2023ರಲ್ಲಿಯೂ ಟಿಕೆಟ್ ಸಿಗುವ ವಿಶ್ವಾಸವಿತ್ತು. ಆಗಲೂ ಪಕ್ಷ ಮನ್ನಣೆ ಕೊಡಲಿಲ್ಲ. ಈ ಬಾರಿಯಾದರೂ ಪರಿಗಣಿಸುವಂತೆ ಕೇಳಿಕೊಂಡಿರುವೆ’ ಎಂದರು.
‘ಕೇಂದ್ರ ಸರ್ಕಾರದ ಸಾಕಷ್ಟು ಅನುದಾನ ಲಭ್ಯವಿದ್ದು, ಆಯ್ಕೆಯಾದ ಸಂಸದರು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಂಥ ನಾಯಕರು ಸ್ಪರ್ಧಿಸಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಲಿದೆ. ಹಾಲಿ ಸಂಸದರು ತಮ್ಮ ಶಕ್ತಿಯ ಅನುಸಾರ ಕೆಲಸ ಮಾಡಿದ್ದಾರೆ. ನಾನು ಟಿಕೆಟ್ ಕೇಳಿದ್ದು, ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಗೌಡ, ರಾಮನಗೌಡ ಗವಿಗಟ್ಟ, ಅಮರೇಶಪ್ಪಗೌಡ, ಕೋಟೇಶ್ವರ ರಾವ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.