ADVERTISEMENT

ನ.11ರಂದು ಮಾದಿಗರ ವಿಶ್ವರೂಪ ಮಹಾಸಭಾ: ಪ್ರಧಾನಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 13:58 IST
Last Updated 3 ನವೆಂಬರ್ 2023, 13:58 IST
ನರಸಪ್ಪ ದಂಡೋರ
ನರಸಪ್ಪ ದಂಡೋರ   

ರಾಯಚೂರು: ‘ಪರಿಶಿಷ್ಟ ಜಾತಿಗೆ ಒಳಮೀಸಲಾತಿ ವರ್ಗೀಕರಣಕ್ಕಾಗಿ ಒತ್ತಾಯಿಸಿ ನ.11 ರಂದು ಹೈದರಾಬಾದ್‌ನ ಪರೇಡ್ ಮೈದಾನದಲ್ಲಿ ‘ಹಲೋ ಮಾದಿಗ ಚಲೋ ಹೈದರಾಬಾದ್’ ಮಾದಿಗರ ವಿಶ್ವರೂಪ ಮಹಾಸಮಾರಂಭ ಆಯೋಜಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ’ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷ ನರಸಪ್ಪ ದಂಡೋರ ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿಗಾಗಿ ಒತ್ತಾಯಿಸಿ ಕಳೆದ 28 ವರ್ಷಗಳಿಂದ ವಿವಿಧ ಹಂತಗಳಲ್ಲಿ ಹೋರಾಟ ಮಾಡಿದರೂ ಇದುವರೆಗೆ ಒಳ ಮೀಸಲಾತಿ ಜಾರಿಯಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದಿಂದ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ವರದಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದರೂ ಇನ್ನೂ ಪ್ರಯೋಜನವಾಗಿಲ್ಲ. ಹೀಗಾಗಿ ಹೈದರಾಬಾದ್‌ನಲ್ಲಿ ರಾಷ್ಟ್ ಮಟ್ಟದ ಕಾರ್ಯಕ್ರಮ ಆಯೋಜಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಒಳ ಮೀಸಲಾತಿಗಾಗಿ ಸದಾಶಿವ ಆಯೋಗ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ವರದಿ ಕೇಂದ್ರ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಬಿಲ್ ಅನ್ನು ಮಂಡಿಸಲು ಆಗ್ರಹಿಸಲಾಗುವುದು. ದಕ್ಷಿಣ ಭಾರತದ ಸುಮಾರು 30 ಲಕ್ಷ ಮಾದಿಗ ಸಮಾಜದ ಮುಖಂಡರು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದ ಪೂರ್ವಭಾವಿಯಾಗಿ ಮಾದಿಗ ಮೀಸಲಾತಿ‌ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಅಕ್ಟೋಬರ್ 7 ರಿಂದ ಗದ್ವಾಲ್ ಜಿಲ್ಲೆಯ ಅಲಂಪುರ ನಿಂದ ಹೈದರಾಬಾದ್‌ವರೆಗೆ 250 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದು‌ ನ.11ರಂದು ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.

ADVERTISEMENT

ಕರ್ನಾಟಕ ರಾಜ್ಯದ 31 ಜಿಲ್ಲೆಗಳಿಂದ ಮಾದಿಗ ಸಮಾಜದ ಮುಖಂಡರು, ಬುದ್ಧಿಜೀವಿಗಳು, ಸಾಹಿತಿಗಳು, ವಕೀಲರು ಹಾಗೂ ಮುಂಚೂಣಿ ನಾಯಕರು, ಸಮಾಜದ ಮುಖ್ಯವಾಹಿನಿಯಲ್ಲಿರುವವರು. ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮಾನಪ್ಪ ಮೇಸ್ತ್ರಿ, ದುಳ್ಳಯ್ಯ ಗುಂಜಹಳ್ಳಿ, ರಂಜಿತ್ ದಂಡೋರ, ಹನುಮಂತ, ನರಸಿಂಹಲು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.