
ಲಿಂಗಸುಗೂರು: ‘ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಅದಕ್ಕೆ ಪಿಡಿಒಗಳೇ ನೇರ ಹೊಣೆ’ ಎಂದು ಶಾಸಕ ಮಾನಪ್ಪ ವಜ್ಜಲ್ ಎಚ್ಚರಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಟಾಸ್ಕ್ ಫೊರ್ಸ್ ಸಭೆಯಲ್ಲಿ ಅವರು ಮಾತನಾಡಿದರು.
‘ಕುಡಿಯುವ ನೀರಿನ ಸಮಸ್ಯೆಯಿರುವ ಹಾಗೂ ಬೇಸಿಗೆ ಸಂದರ್ಭದಲ್ಲಿ ಮತ್ತಷ್ಟು ಸಮಸ್ಯೆಯಾಗುವ ಹಳ್ಳಿಗಳ ಪಟ್ಟಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಬೋರ್‌ವೆಲ್ ದುರಸ್ತಿ ಇದ್ದರೆ ಕೂಡಲೇ ಸರಿ ಮಾಡಿಸಿ. ಕುಡಿಯುವ ನೀರಿನ ಬಗ್ಗೆ ದೂರು ಬಂದರೆ ಆ ವ್ಯಾಪ್ತಿಯ ಪಿಡಿಒಗಳನ್ನು ಹೊಣೆ ಮಾಡಿ ಅಮಾನತಿ ಶಿಫಾರಸು ಮಾಡಿ’ ಎಂದು ತಾ.ಪಂ ಇಒಗೆ ಸೂಚಿಸಿದರು.
ದೇವಭೂಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆ ವಿದ್ಯುತ್ ಪರಿವರ್ತಕ ಪದೆಪದೇ ಹಾಳಾಗುತ್ತಿರುವುದರಿಂದ ನೀರು ಪೂರೈಕೆಗೆ ಸಮಸ್ಯೆಯಾಗುತ್ತಿದೆ, ಅಮರೇಶ್ವರದ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಬೋರ್‌ವೆಲ್ ಇಲ್ಲದೆ ಪಕ್ಕದ ಖಾಸಗಿ ಜಮೀನಿನಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು ಪ್ರತ್ಯೇಕ ಬೋರ್‌ವೆಲ್ ಹಾಕಿಸಬೇಕು ಎಂದು ಪಿಡಿಒ ಸಭೆಯ ಗಮನಕ್ಕೆ ತಂದರು.
ಅನಧಿಕೃತ ಸಂಪರ್ಕಗಳು ಇರುವುದರಿಂದ ನೀರಿನ ಯೋಜನೆಯ ಟಿಸಿ ಸುಡುತ್ತಿದ್ದು ಕೂಡಲೇ ಅವುಗಳನ್ನು ಕತ್ತರಿಸಿ ಎಂದು ಜೆಸ್ಕಾಂ ಎಇಇ ಅವರಿಗೆ ಶಾಸಕ ವಜ್ಜಲ್ ಸೂಚಿಸಿದರು.
ಪಿಡಿಒ, ಜೆಸ್ಕಾಂ ಎಇಇ, ಗ್ರಾಮೀಣ ಕುಡಿವ ನೀರು ಇಲಾಖೆಗಳು ಕುಡಿಯುವ ನೀರಿನ ವಿಷಯದಲ್ಲಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
‘ಕಾಟಾಚಾರಕ್ಕೆ ಬರಬೇಡಿ’: ತಮ್ಮ ಇಲಾಖೆ ಮಾಹಿತಿ ಇಲ್ಲದೆ ಸಭೆಗೆ ಬಂದಿದ್ದ ಅಧಿಕಾರಿಗಳ ವಿರುದ್ಧ ಗರಂ ಆದ ಶಾಸಕರು, ‘ನೀರಿನ ಸಮಸ್ಯೆ ಬಗ್ಗೆ ಸಭೆ ಕರೆದಿದ್ದೇನೆ, ನೀವು ಮಾಹಿತಿ ಇಲ್ಲದೆ ಬಂದಿದ್ದೀರಿ ಅಂದರೆ ಸಭೆಯ ಗಂಭೀರತೆ ಅರಿವು ಇಲ್ಲವಾ, ಕಾಟಾಚಾರಕ್ಕಾಗಿ ಸಭೆಗೆ ಬರಬೇಡಿ. ಈ ಬಗ್ಗೆ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಎಚ್ಚರಿಸಿದರು.
ತಾ.ಪಂ ಆಡಳಿತಾಧಿಕಾರಿ ವಿಜಯಶಂಕರ್, ಇಒ ಉಮೇಶ ಹಾಗೂ ಗ್ರಾ.ಪಂ ಆಡಳಿತಾಧಿಕಾರಿಗಳು, ಪಿಡಿಒಗಳು ಸಭೆಯಲ್ಲಿ ಹಾಜರಿದ್ದರು.
ಮೊಬೈಲ್‌ನಲ್ಲಿ ಮಗ್ನರಾದ ಅಧಿಕಾರಿಗಳು: ಶಾಸಕ ವಜ್ಜಲ್ ಅವರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಭೆ ನಡೆಸುತ್ತಿದ್ದರೆ ಕೆಲವು ಅಧಿಕಾರಿಗಳು ತಮಗೂ ಸಭೆಗೂ ಸಂಬಂಧವಿಲ್ಲ ಎಂಬುವಂತೆ ಮೊಬೈಲ್ ನೋಡುವುದರಲ್ಲಿ ಕಾರ್ಯನಿರತರಾಗಿರುವುದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.