
ಮಸ್ಕಿ: ‘ನಾವುಗಳು ಸಂಕುಚಿತ ಮನೋಭಾವದಿಂದ ಹೊರ ಬರಬೇಕಾಗಿದೆ’ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮನೋಹರ ಮಸ್ಕಿ ಅಭಿಪ್ರಾಯಪಟ್ಟರು.
ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ಎಂ. ಬಸವರಾಜ ಅವರ ದೊಡ್ಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀಶೈಲಪ್ಪ ಹಾಗೂ ಈರಮ್ಮ ಮಸ್ಕಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶರಣರು ಮತ್ತು ದಾರ್ಶನಿಕರು ಸಾರಿದ ಸಮಾನತೆ–ಸೌಹಾರ್ದದ ಸಂದೇಶವನ್ನು ಇಂದಿನ ಸಮಾಜ ವಿಸ್ಮರಿಸುತ್ತಿರುವುದನ್ನು ವಿಷಾದಿಸಿದರು.
‘ಬಸವಣ್ಣ, ಗಾಂಧೀಜಿ ತತ್ವಗಳಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಪ್ರತಿ ನಾಗರಿಕನ ಹೊಣೆ. ಶರಣರು ಬೋಧಿಸಿದ ಮಾನವೀಯ ಮೌಲ್ಯಗಳನ್ನು ಜಾತಿ, ವರ್ಣದ ಚೌಕಟ್ಟಿನಲ್ಲಿ ಸಿಮಿತಗೊಳಿಸುವುದು ದೊಡ್ಡ ತಪ್ಪು’ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಮಸ್ಕಿ (ವಕೀಲ) ಮಾತನಾಡಿ, ಸುತ್ತೂರಿನ ದೇಶಿಕೇಂದ್ರ ಸ್ವಾಮೀಜಿ ಆರಂಭಿಸಿದ ಶರಣ ಸಾಹಿತ್ಯ ಪರಿಷತ್ತು ಇಂದು ದೇಶ–ವಿದೇಶಗಳಲ್ಲಿ ಶರಣರ ವಿಚಾರಧಾರೆಯನ್ನು ಪ್ರಚಾರ ಪಡಿಸುತ್ತಿದೆ’ ಎಂದರು.
ತಿಮ್ಮನೌಡ ಚಿಲ್ಕರಾಗಿ ವಿಶೇಷ ಉಪನ್ಯಾಸ ನೀಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ವೀರೇಶ ಸೌದ್ರಿ, ಮಹಾಮನೆ ಸಮಿತಿ ಅಧ್ಯಕ್ಷ ದುರಗಪ್ಪ ಮಾಸ್ತರ್, ಗುತ್ತಿಗೆದಾರ ಎಂ. ಪ್ರಭುದೇವ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ವಕೀಲ ಕಿರಣ ಪಿ. ಮಸ್ಕಿ ಪ್ರಾರ್ಥನೆ ಸಲ್ಲಿಸಿದರು. ಮೊಹಿತ್ ಮಸ್ಕಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.