ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಯವರ 351ನೇ ಆರಾಧನಾ ಮಹೋತ್ಸವ ಸಂಭ್ರಮದಿಂದ ನೆರವೇರುತ್ತಿದ್ದು, ನಾಲ್ಕನೇ ದಿನವಾದ ಶನಿವಾರ ನಡೆದ ಮಧ್ಯಾರಾಧನೆಯಲ್ಲಿ ದೇಶದ ವಿವಿಧೆಡೆಯಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಬೆಳಿಗ್ಗೆಯಿಂದ ವಿಶೇಷ ಪೂಜಾ ವಿಧಿವಿಧಾನಗಳು ಆರಂಭವಾಗಿವೆ. ರಾಯರ ಮೂಲವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ ನೆರವೇರಿಸಿದ ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು, ನವರತ್ನ ಕವಚವನ್ನು ಸಮರ್ಪಿಸಿದರು. ವೃಂದಾವನಕ್ಕೆ ವಿಶೇಷ ಪುಷ್ಪಾಲಂಕಾರ, ವಸ್ತ್ರಾಲಂಕಾರ ಮಾಡಿದರು. ತಿರುಪತಿ ತಿರುಮಲದಿಂದ ತರಲಾಗಿದ್ದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ರಾಯರ ಸನ್ನಿಧಿಗೆ ಇಡಲಾಯಿತು. ಆನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.
ಮಧ್ಯಾರಾಧನೆ ನಿಮಿತ್ತ ಮಠದ ಪ್ರಾಕಾರದಲ್ಲಿ ಸುವರ್ಣ ರಥೋತ್ಸವ ವಿಶೇಷವಾಗಿತ್ತು. ಚಂಡಿವಾದ್ಯ ವೈಭವ ಹಾಗೂ ವೇದಮಂತ್ರ ಘೋಷಣೆಗಳೊಂದಿಗೆ ರಥೋತ್ಸವ ನಡೆಯಿತು.
ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ರಾಯರಿಗೆ ಜಯ ಘೋಷಣೆಗಳನ್ನು ಕೂಗಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ರಾಯರ ಮಧ್ಯಾರಾಧನೆಯಲ್ಲಿ ಪಾಲ್ಗೊಂಡು, ದರ್ಶನ ಪಡೆದು ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.