ADVERTISEMENT

ಸಂಭ್ರಮದಿಂದ ನೆರವೇರಿದ 350ನೇ ಆರಾಧನಾ ಮಹೋತ್ಸವ

ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ಸಂಪನ್ನ

ನಾಗರಾಜ ಚಿನಗುಂಡಿ
Published 25 ಆಗಸ್ಟ್ 2021, 12:57 IST
Last Updated 25 ಆಗಸ್ಟ್ 2021, 12:57 IST
ಮಂತ್ರಾಲಯದಲ್ಲಿ ಬುಧವಾರ ನಡೆದ ರಾಯರ ಉತ್ತರಾರಾಧನೆಯಂದು ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಬಣ್ಣ ಎರಚಿ ವಸಂತೋತ್ಸವ ಆಚರಿಸಿದರು
ಮಂತ್ರಾಲಯದಲ್ಲಿ ಬುಧವಾರ ನಡೆದ ರಾಯರ ಉತ್ತರಾರಾಧನೆಯಂದು ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಬಣ್ಣ ಎರಚಿ ವಸಂತೋತ್ಸವ ಆಚರಿಸಿದರು   

ಮಂತ್ರಾಲಯ (ರಾಯಚೂರು): ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವದ ಕೊನೆಯ ದಿನದಂದು ಬುಧವಾರ, ಮಹಾರಥೋತ್ಸವವು ಸಂಭ್ರಮ, ಸಡಗರದಿಂದ ನೆರವೇರಿತು.

ಕೋವಿಡ್‌ ಕಾರಣದಿಂದ ಭಕ್ತರ ದಟ್ಟಣೆ ಇರಲಿಲ್ಲ. ಆದರೂ ನಿರೀಕ್ಷೆ ಮೀರಿ ಭಕ್ತರು ರಾಯರ ದರ್ಶನಕ್ಕಾಗಿ ಸೇರಿದ್ದಾರೆ. ಮಹಾಮಾರಿ ಕಾರಣದಿಂದ ಲಕ್ಷಾಂತರ ಭಕ್ತರು ಆನ್‌ಲೈನ್‌ ಮೂಲಕವೇ ಮಂತ್ರಾಲಯದ ಕಾರ್ಯಕ್ರಮಗಳನ್ನು ವೀಕ್ಷಿಸಿ ರಾಯರ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ ಎಂದು ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಹೇಳಿದರು.

ಮಹಾರಥೋತ್ಸವ ಜರುಗುವ ಪೂರ್ವ ಬೆಳಗಿನಜಾವ ನಿರ್ಮಾಲ್ಯ, ಮೂಲರಾಮದೇವರ ಸಂಸ್ಥಾನ ಪ್ರತಿಮೆಗಳಿಗೆ ಪೂಜೆ, ಮೂಲ ವೃಂದಾವನ ಪೂಜೆಗಳನ್ನು ನೆರವೇರಿಸಿದ ಬಳಿಕ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಸಂಸ್ಕೃತ ವಿದ್ಯಾಪೀಠಕ್ಕೆ ತೆಗೆದುಕೊಂಡು ಹೋಗಲಾಯಿತು. ರಾಯರು ವಿದ್ಯಾಪೀಠವನ್ನು ಪರಿಶೀಲಿಸುತ್ತಾರೆ ಎನ್ನುವ ನಂಬಿಕೆ ಇದೆ. ಅಲ್ಲಿಂದ ಮೂಲ ವೃಂದಾವನ ಗರ್ಭಗುಡಿವರೆಗೂ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತರಲಾಯಿತು.

ADVERTISEMENT

ಶ್ರೀಗಳು ಭಕ್ತರಿಗೆ ಬಣ್ಣ ಎರಚಿ ವಸಂತೋತ್ಸವ ಆಚರಣೆಗೆ ಚಾಲನೆ ನೀಡಿದರು. ಬಣ್ಣದೋಕುಳಿ ಮಧ್ಯೆಯೇ ಉತ್ಸವರಾಯರನ್ನು ಮಹಾರಥದಲ್ಲಿ ಇರಿಸಲಾಯಿತು. ಪೂಜೆ ಸಲ್ಲಿಸಿದ ಬಳಿಕ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಥದಲ್ಲಿ ಆಸೀನರಾಗಿ ಅನುಗ್ರಹ ಸಂದೇಶ ನೀಡಿದರು.
‘350 ವರ್ಷಗಳ ಹಿಂದೆ ಶ್ರೀರಾಘವೇಂದ್ರ ರಾಯರು ಸಶರೀರರಾಗಿ ವೃಂದಾವನ ಪ್ರವೇಶಿಸಿದ್ದು, ಇಂದಿಗೂ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ. ಭಕ್ತಿಯಿಂದ ರಾಘವೇಂದ್ರ ಸ್ವಾಮಿಗಳನ್ನು ಸ್ವಲ್ಪ ಪ್ರಾರ್ಥಿಸಿದರೂ ಅನುಗ್ರಹವನ್ನು ದಯಪಾಲಿಸುವ ಕಲಿಯುಗದ ಕಾಮಧೇನು ಆಗಿದ್ದಾರೆ. ರಾಘವೇಂದ್ರ ಸ್ವಾಮಿಗಳನ್ನು ಸ್ಮರಿಸುವ ಎಲ್ಲರಿಗೂ ಅವರು ಕರುಣಿಸುತ್ತಾರೆ. ಜಾತಿ, ಮತ, ಪ್ರದೇಶಗಳ ಬೇಧವಿಲ್ಲದೆ ಆಶೀರ್ವದಿಸುವ ಆರಾಧ್ಯ ಧೈವ ರಾಯರಾಗಿದ್ದಾರೆ’ ಎಂದರು.

‘ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ರಾಘವೇಂದ್ರ ರಾಯರು ಎಂಬುದು ಜನರ ಮಾತುಗಳಲ್ಲಿದೆ. ಬಡವ, ದೀನ, ದಲಿತರನ್ನು ಉದ್ಧರಿಸುವ ಕಾರ್ಯ ಮಾಡುತ್ತಿದ್ದಾರೆ. ಕೋವಿಡ್ ಕಾರಣದಿಂದ ಭಕ್ತರು ಎಲ್ಲ ರಂಗಗಳಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಕಾರಣದಿಂದ ಈ ವರ್ಷ ಆರಾಧನೆಯನ್ನು ಸರಳ ರೂಪದಲ್ಲಿ ಆಚರಿಸಲ ನಿರ್ಧರಿಸಲಾಗಿತ್ತು. ‌ಆದರೂ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದಾರೆ. ಮಠದ ಏಳಿಗೆಗಾಗಿ ಅನೇಕ ಭಕ್ತರು ದೇಣಿಗೆ ನೀಡಿದ್ದಾರೆ’ ಎಂದು ತಿಳಿಸಿದರು.

ಮಠದ ಮುಂಭಾಗದಲ್ಲಿ ಬಹುಕೋಟಿ ಮೌಲ್ಯದ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ. ಜಾತ್ಯತೀತವಾಗಿ ಭಕ್ತರು ದೇಣಿಗೆ ನೀಡಿದ್ದಾರೆ. ಪ್ರತಿಯೊಂದನ್ನು ರಾಯರೆ ಎಲ್ಲವನ್ನು ಮಾಡಿಸುತ್ತಿದ್ದಾರೆ. ಇದು ಭಕ್ತರ ಮಠ. ಮಂತ್ರಾಲಯ ಅಭಿವೃದ್ಧಿಗಾಗಿ ₹2 ಸಾವಿರ ಕೋಟಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮಾಡಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೆರವು ಹಾಗೂ ಭಕ್ತರಿಂದ ಇದನ್ನು ನೆರವೇರಿಸಲಾಗುತ್ತಿದೆ. ವಿಮಾನ ನಿಲ್ದಾಣ ತಲೆ‌ ಎತ್ತಲಿದ್ದು, ಇದಕ್ಕಾಗಿ ಭೂಮಿ ಒದಗಿಸಲಾಗುವುದು ಎಂದು ಹೇಳಿದರು.

ರಾಘವೇಂದ್ರ ವೃತ್ತದವರೆಗೂ ರಥೋತ್ಸವ ಜರುಗಿತು. ಭಜನೆ, ಕೋಲಾಟ, ಬಹಿರೂಪಿ, ಜಾಂಜ್ ಪತಾಕ್, ಚಂಡಿವಾದ್ಯ, ಡೊಳ್ಳು ಕುಣಿತ, ಕರಗ ಕುಣಿತ ಕಲಾಗಿದರು ರಥೋತ್ಸವದ ಎದುರು ಕಲೆ ಪ್ರದರ್ಶನ ಮಾಡುತ್ತಾ ಸಾಗಿದ್ದು ವಿಶೇಷವಾಗಿತ್ತು.
ಶ್ರೀಗಳು ಹೆಲಿಕಾಪ್ಟರ್ ಮೂಲಕ ರಥೋತ್ಸವದ ಪುಷ್ಪವೃಷ್ಟಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.