ಮಾನ್ವಿ: ಪಟ್ಟಣದ ಬಸವ ಐಟಿಐ ಕಾಲೇಜು ವಿದ್ಯಾರ್ಥಿಗಳು ಅಂಗವಿಕಲ ವಿದ್ಯಾರ್ಥಿಗಾಗಿ ವ್ಹೀಲ್ ಚೇರ್ ತಯಾರಿಸಿದ್ದಾರೆ.
ಸಿರವಾರ ತಾಲ್ಲೂಕಿನ ಅತ್ತನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಸುಬಾನ್ ಅಂಗವಿಕಲನಾಗಿದ್ದಾನೆ. ವ್ಹೀಲ್ ಚೇರ್ ಪದೇ ಪದೇ ದುರಸ್ತಿಗೆ ಬರುತ್ತಿದ್ದ ಕಾರಣ ಶಾಲೆಗೆ ಗೈರಾಗುತ್ತಿದ್ದ. ವಿಷಯ ತಿಳಿದ ಶಿಕ್ಷಣ ಸಂಯೋಜಕ ಎಂ.ಎ.ಯೂನುಸ್ ಬಸವ ಐಟಿಐ ಕಾಲೇಜು ಪ್ರಾಂಶುಪಾಲ ತಿಪ್ಪಣ್ಣ ಎಂ.ಹೊಸಮನಿ ಅವರ ಗಮನಕ್ಕೆ ತಂದಿದ್ದರು.
ಬಸವ ಐಟಿಐ ಕಾಲೇಜಿನ ಪ್ರಾಂಶುಪಾಲರು ಹಾಗೂ ಕಿರಿಯ ತರಬೇತಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಹೊಸ ವಿನ್ಯಾಸದಲ್ಲಿ ವ್ಹೀಲ್ ಚೇರ್ ಸಿದ್ಧಪಡಿಸಿದ್ದಾರೆ. ರಾಯಚೂರಿನ ಮಿಲ್ಲತ್ ಡಾಕ್ಟರ್ಸ್ ಟ್ರಸ್ಟ್ ಪದಾಧಿಕಾರಿಗಳು ಈ ವ್ಹೀಲ್ ಚೇರ್ ಸಿದ್ಧಪಡಿಸಲು ಆರ್ಥಿಕ ನೆರವು ನೀಡಿದ್ದಾರೆ. ಸೈಕಲ್ ಗಾಲಿಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಸಿದ್ಧಪಡಿಸಲಾಗಿರುವ ಈ ವ್ಹೀಲ್ ಚೇರ್ ಮೂಲಕ ವಿದ್ಯಾರ್ಥಿ ಸುಬಾನ್ ರಸ್ತೆಯಲ್ಲಿ ಸರಾಗವಾಗಿ ಸಂಚರಿಸಬಹುದಾಗಿದೆ. ಬಸವ ಐಟಿಐ ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.