ADVERTISEMENT

‌ಸಮ ಸಮಾಜಕ್ಕಾಗಿ ವೈಚಾರಿಕ ಕ್ರಾಂತಿ: ಬಿ.ಜಿ.ಹುಲಿ

ಮಾನ್ವಿ: ಬಸವ ಗೀತೆ ಸತ್ಯ ಸಂವಾದ ಸಂಪುಟಗಳ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:25 IST
Last Updated 29 ಡಿಸೆಂಬರ್ 2025, 6:25 IST
ಮಾನ್ವಿಯಲ್ಲಿ ಶನಿವಾರ ಪತ್ರಕರ್ತ ಬಸವರಾಜ ಸ್ವಾಮಿ ರಚಿಸಿದ ಬಸವ ಗೀತೆ ಸತ್ಯ ಸಂವಾದ ಸಂಪುಟಗಳನ್ನು ಗಣ್ಯರು ಲೋಕಾರ್ಪಣೆ ಮಾಡಿದರು
ಮಾನ್ವಿಯಲ್ಲಿ ಶನಿವಾರ ಪತ್ರಕರ್ತ ಬಸವರಾಜ ಸ್ವಾಮಿ ರಚಿಸಿದ ಬಸವ ಗೀತೆ ಸತ್ಯ ಸಂವಾದ ಸಂಪುಟಗಳನ್ನು ಗಣ್ಯರು ಲೋಕಾರ್ಪಣೆ ಮಾಡಿದರು   

ಮಾನ್ವಿ: ‌‘ಹನ್ನೆರಡನೇ ಶತಮಾನದಲ್ಲಿ ಸಮ ಸಮಾಜ ನಿರ್ಮಾಣಕ್ಕಾಗಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಹಲವು ಶರಣರು ನಡೆಸಿದ ವೈಚಾರಿಕ ಕ್ರಾಂತಿಗೆ ಜನಸಾಮಾನ್ಯರು ಕೈಜೋಡಿಸಿದ್ದರು’ ಎಂದು ನಿವೃತ್ತ ಉಪನ್ಯಾಸಕ ಬಿ.ಜಿ.ಹುಲಿ ಹೇಳಿದರು.

ಶನಿವಾರ ಸಂಜೆ ಪಟ್ಟಣದ ಬಿವಿಆರ್ ಶಾಲೆಯ ಆವರಣದಲ್ಲಿ ಬಸವ ಸೇವಾ ಪ್ರತಿಷ್ಠಾನ, ಬಸವ ಕೇಂದ್ರ, ಶರಣ ಸಾಹಿತ್ಯ ಪರಿಷತ್ತು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ಪತ್ರಕರ್ತ ಬಸವರಾಜ ಸ್ವಾಮಿ ರಚಿಸಿದ ‘ಬಸವ ಗೀತೆ ಸತ್ಯ ಸಂವಾದ’ 9 ಸಂಪುಟಗಳ ಗುಚ್ಚ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಕೃತಿಯ ಕರ್ತೃ ಬಸವರಾಜ ಸ್ವಾಮಿ ಮಾತನಾಡಿ, ‘ಬಸವಣ್ಣನವರನ್ನು ಸಾಹಿತಿಗಳು, ದಾರ್ಶನಿಕರು, ಚಿಂತಕರು, ಪ್ರಗತಿಪರರು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಂಡು ವ್ಯಾಖ್ಯಾನಿಸಿದ್ದಾರೆ. ಆದರೆ ಬಸವಣ್ಣವನರು ತಮ್ಮ ಅರಿವನ್ನು ಗುರುವಾಗಿಸಿಕೊಂಡವರು. ಬಸವಣ್ಣವನರ ಮೂಲಕ ಪಡೆದ ಅರಿವಿಗೆ ಶರಣಾದವರು ಶರಣರೆನಿಸಿಕೊಂಡರು. ನಮ್ಮಲಿರುವ ಅರಿವು ಬಳಸಿಕೊಳ್ಳಲು ಶರಣರ ವಚನಗಳು ನೆರವಾಗುತ್ತವೆ’ ಎಂದು ತಿಳಿಸಿದರು.

ADVERTISEMENT

ನಿವೃತ್ತ ಶಿಕ್ಷಣಾಧಿಕಾರಿ ಡಿ.ಜಿ.ಕರ್ಕಿಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು.

ಬಸವ ಕೇಂದ್ರದ ಗೌರವಾಧ್ಯಕ್ಷ ಬಸವಪ್ರಭು ಪಾಟೀಲ ಬೆಟ್ಟದೂರು, ಅಧ್ಯಕ್ಷ ಜಿ‌.ಎಂ.ರಂಗಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮೀ ಪಾಟೀಲ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಈ.ನರಸಿಂಹ, ಕಸಾಪ ಅಧ್ಯಕ್ಷ ಶರಣಬಸವ ನೀರಮಾನ್ವಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ರಾಜಾ ಸುಭಾಷ್ ಚಂದ್ರ ನಾಯಕ, ಮುಖಂಡರಾದ ಎಚ್.ಶರ್ಪುದ್ದೀನ್ ಪೋತ್ನಾಳ, ಮೂಕಪ್ಪ ಕಟ್ಟಿಮನಿ, ಪಿ.ಪರಮೇಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.