ADVERTISEMENT

ಮಾನ್ವಿ ಪುರಸಭೆ ಮೇಲ್ದರ್ಜೆಗೇರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 7:23 IST
Last Updated 26 ಸೆಪ್ಟೆಂಬರ್ 2025, 7:23 IST
ಮಾನ್ವಿಯ ಪುರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರನಾಯಕ ಮಾತನಾಡಿದರು
ಮಾನ್ವಿಯ ಪುರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರನಾಯಕ ಮಾತನಾಡಿದರು   

ಮಾನ್ವಿ: ‘‌ಪುರಸಭೆಯನ್ನು ನಗರಸಭೆಗೆ ಮೆಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪುರಸಭೆಯ ವಿರೋಧ ಪಕ್ಷದ ನಾಯಕ ರಾಜಾ ಮಹೇಂದ್ರನಾಯಕ ಒತ್ತಾಯಿಸಿದರು.

ಗುರುವಾರ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಮೀನಾಕ್ಷಿ ಡಿ.ರಾಮಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಪಟ್ಟಣದ ಜನತೆಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸರ್ಕಾರದಿಂದ ಪುರಸಭೆಗೆ ಅಂದಾಜು ₹4ಕೋಟಿಗೂ ಹೆಚ್ಚು ಅನುದಾನ ಬಂದಿದೆ. ಆದರೆ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸದಸ್ಯರು ತಮ್ಮ ವಾರ್ಡಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳ ಕುರಿತು ಬೇಡಿಕೆ ಇಟ್ಟಲ್ಲಿ ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ವಿಫಲರಾಗಿದ್ದಾರೆ’ ಎಂದು ಅವರು ದೂರಿದರು.

ADVERTISEMENT

ಸದಸ್ಯೆ ಲಕ್ಷ್ಮೀದೇವಿ ನಾಯಕ ಮಾತನಾಡಿ, ‘ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಇರುವ ಪುರಸಭೆಯ 30 ವಾಣಿಜ್ಯ ಮಳಿಗೆಗಳ ಬಾಡಿಗೆ ಟೆಂಡರ್ ಕೂಡಲೇ ಕರೆಯಬೇಕು’ ಎಂದರು.

ಸದಸ್ಯ ಶೇಖ್ ಫರೀದ್ ಉಮರಿ ಮಾತನಾಡಿ, ‘ಪುರಸಭೆಯ ಅಭಿವೃದ್ಧಿ ಕಾರ್ಯಗಳಲ್ಲಿ ಕಳಪೆ ಕಾಮಗಾರಿಗಳನ್ನು ಕೈಗೊಳ್ಳುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.

ಸದಸ್ಯ ಅಮ್ಜದ್ ಖಾನ್ ಮಾತನಾಡಿ, ‘ಪಟ್ಟಣದಲ್ಲಿರುವ ಅನಧಿಕೃತ ಕಟ್ಟಡಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಇತರ ಸದಸ್ಯರು ತಮ್ಮ ವಾರ್ಡಗಳಲ್ಲಿನ ಸಮಸ್ಯೆಗಳ ಬಗ್ಗೆ ವಿವರಿಸಿದರು.

‌ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ಮಾತನಾಡಿ, ‘ಸದಸ್ಯರ ಸಲಹೆಯಂತೆ ಪಟ್ಟಣದ ಜನರಿಗೆ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.