ADVERTISEMENT

ಮಾನ್ವಿ | ಬೆಳೆಹಾನಿ ಪರಿಹಾರ ನೀಡಲು ಒತ್ತಾಯ: ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 8:42 IST
Last Updated 1 ಅಕ್ಟೋಬರ್ 2025, 8:42 IST
ಮಾನ್ವಿಯಲ್ಲಿ ಮಂಗಳವಾರ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಸಲ್ಲಿಸಿದರು
ಮಾನ್ವಿಯಲ್ಲಿ ಮಂಗಳವಾರ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಸಲ್ಲಿಸಿದರು   

ಮಾನ್ವಿ: ತಾಲ್ಲೂಕಿನಲ್ಲಿ ಮಳೆಯಿಂದಾಗಿ ಬೆಳೆಹಾನಿ ಅನುಭಿಸಿರುವ ರೈತರಿಗೆ ತಕ್ಷಣ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವ ವೃತ್ತದಲ್ಲಿ ಎರಡು ತಾಸು ಧರಣಿ ನಡೆಸಿದ ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ರಸ್ತೆಯಲ್ಲಿ ವಾಹನ ಸಂಚಾರ ತಡೆದರು.

ನಂತರ ಮಾನವ ಸರಪಳಿ ನಿರ್ಮಿಸಿ ಘೋಷಣೆಗಳ ಮೂಲಕ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿದರು.

ADVERTISEMENT

ನಂತರ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿದ ಪ್ರತಿಭಟನಕಾರರು, ರೈತರಿಗೆ ಪರಿಹಾರ ವಿತರಣೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ತಾಲ್ಲೂಕಿನಲ್ಲಿ ಕಳೆದ ಮೂರು ತಿಂಗಳಿನಿಂದ ಹೆಚ್ಚುವರಿ ಮುಂಗಾರು ಮಳೆಯಿಂದಾಗಿ 25,477 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹತ್ತಿ, 22,863 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಮತ್ತು 725 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾದ ತೊಗರಿ ಬೆಳೆಗೆ ಸಂಪೂರ್ಣ ಹಾನಿ ಸಂಭವಿಸಿದೆ. ರಾಜ್ಯ ಸರ್ಕಾರ ತಕ್ಷಣ ಹತ್ತಿಗೆ ಪ್ರತಿ ಎಕರೆಗೆ ₹35 ಸಾವಿರ, ಮುಂಗಾರು ಜೋಳ (ಹೈಬ್ರಿಡ್) ಮತ್ತು ತೊಗರಿ ಬೆಳೆ ಪ್ರತಿ ಎಕರೆಗೆ ₹30 ಸಾವಿರ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಸಲ್ಲಿಸಿದರು.

ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಮರ್ಲಟ್ಟಿ, ಮುಖಂಡರಾದ ರಾಜಾ ಮಹೇಂದ್ರ ನಾಯಕ, ರಾಜಾ ರಾಮಚಂದ್ರ ನಾಯಕ, ಮಲ್ಲಿಕಾರ್ಜುನ ಪಾಟೀಲ, ಶರಣಪ್ಪಗೌಡ ಮದ್ಲಾಪುರ, ಬಾಷಾ ಸಾಬ್, ಮಲ್ಲಪ್ಪ ಹೂಗಾರ, ಶರಣಪ್ಪ ಮೇದಾ, ಎಚ್.ಮೌನೇಶಗೌಡ, ಶ್ರೀಧರ ಸ್ವಾಮಿ, ಶಂಕರಗೌಡ ಸಂಗಾಪುರ, ಸುಭಾನ್ ಬೇಗ್, ಲಕ್ಷ್ಮಣ ಯಾದವ, ವಿಜಯ ನಾಯಕ, ಎಂ.ಡಿ.ಉಸ್ಮಾನ್, ಬಸನಗೌಡ ಉಟಕನೂರು, ಮೌನೇಶ ನಾಯಕ, ಎಂ.ಡಿ.ನುಸ್ರತ್, ಸೂಗುರಯ್ಯ ಸ್ವಾಮಿ, ಬಸನಗೌಡ ಬೆಟ್ಟದೂರು, ಬಸವರಾಜ ಭಜಂತ್ರಿ ಉಪಸ್ಥಿತರಿದ್ದರು.

ರಾಜ್ಯ ಸರ್ಕಾರ ತ್ವರಿತವಾಗಿ ಬೆಳೆ ಹಾನಿ ಪರಿಹಾರ ನೀಡುವುದರ ಜತೆಗೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು
ರಾಜಾ ವೆಂಕಟಪ್ಪ ನಾಯಕ ಮಾಜಿ ಶಾಸಕ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.