
ಮಸ್ಕಿ: ಬಹುಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಕೈಗೊಂಡಿರುವ ಜಲಧಾರೆ ಹಾಗೂ ಅಮೃತ 2.0 ಯೋಜನೆಯ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ನೂರೆಂಟು ವಿಘ್ನ ಹಾಗೂ ಹಲವು ತಾಂತ್ರಿಕ ಅಡ್ಡಿಗಳಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದ್ದು, ಜನರಿಗೆ ತೊಂದರೆಯಾಗಿದೆ.
ಕೃಷ್ಣಾ ನದಿಯಿಂದ ತಾಲ್ಲೂಕಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದ ₹2,700 ಕೋಟಿ ವೆಚ್ಚದ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪಟ್ಟಣದಲ್ಲಿ ನಡೆಯುತ್ತಿದೆ.
ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆ ಬದಿ ಪೈಪ್‌ಲೈನ್ ಅಳವಡಿಕೆಗೆ ವಿದ್ಯುತ್ ಕಂಬಗಳು, ಒಳಚರಂಡಿ ಹಾಗೂ ಪುರಸಭೆಯ ಕುಡಿಯುವ ನೀರಿನ ಪೈಪ್‌ಗಳು ಅಡ್ಡಿಯಾದ ಕಾರಣ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಇದೀಗ ಶುರುವಾಗಿದೆ. ಮಂದಗತಿಯಲ್ಲಿ ಸಾಗುತ್ತಿದೆ.
ಪುರಸಭೆ ಆಡಳಿತ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಲಧಾರೆ ಯೋಜನೆಯ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.
ಅಮೃತ 2.0 ಯೋಜನೆ: ₹50 ಕೋಟಿ ವೆಚ್ಚದಲ್ಲಿ ಪಟ್ಟಣದ 23 ವಾರ್ಡ್‌ಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಅಮೃತ 2.0 ಯೋಜನೆ ಹಲವು ತಿಂಗಳಿನಿಂದ ಕಾರಣಗಳಿಂದ ಸ್ಥಗಿತಗೊಂಡಿದೆ.
ಪುರಸಭೆ ಹಾಗೂ ವಾಟರ್ ಬೋರ್ಡ್ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರ ನಿಧಾನಗತಿಯ ಕೆಲಸದಿಂದ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಇಲ್ಲಿಯವರೆಗೂ ಕಾಮಗಾರಿಯು ಶೇ 60ರಷ್ಟು ಪ್ರಗತಿ ಕಾಣಬೇಕಾಗಿತ್ತು. ಆದರೆ, ಶೇ 10ರಷ್ಟು ಸಹ ಪ್ರಗತಿ ಆಗಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಯೋಜನೆಯ ಗುತ್ತಿಗೆ ಪಡೆದ ಬಿಹಾರ ಮೂಲದ ಗುತ್ತಿಗೆದಾರರಿಗೆ ಹಲವಾರು ನೋಟಿಸ್‌ಗಳನ್ನು ನೀಡಿ ಎಚ್ಚರಿಕೆ ನೀಡಲಾಗಿದೆ.
1ನೇ ವಾರ್ಡ್‌ನ ಬಸವೇಶ್ವರ ನಗರದಲ್ಲಿ ಅರೆಬರೆ ಕಾಮಗಾರಿ ಮಾಡಿ ಬಿಟ್ಟು ಹೋದ ಗುತ್ತಿಗೆದಾರರು 4ನೇ ವಾರ್ಡ್‌ನಲ್ಲಿ ಕೆಲಸ ಆರಂಭಿಸಿ ಅಲ್ಲಿಯೂ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಎಲ್ಲೆಂದರಲ್ಲಿ ಕಾಂಕ್ರಿಟ್ ರಸ್ತೆ ಒಡೆದು ಹಾಳು ಮಾಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಈ ಯೋಜನೆ ತಂದಿದ್ದರು ಸಹ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಬೇಜವ್ದಾರಿಯಿಂದ ಕಾಮಗಾರಿ ಪೂರ್ಣಗೊಳ್ಳದೆ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಲಧಾರೆ ಯೋಜನೆಯ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಿ ನೀರು ಸರಬರಾಜು ಮಾಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆಆರ್.ಬಸನಗೌಡ ತುರ್ವಿಹಾಳ ಶಾಸಕ
ಅಮೃತ ಯೋಜನೆ 2.0 ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯ ವೇಗ ಹೆಚ್ಚಿಸುವಂತೆ ಗುತ್ತಿಗೆದಾರರಿಗೆ ಈಗಾಗಲೇ ಹಲವು ನೋಟೀಸ್‌ಗಳನ್ನು ನೀಡಲಾಗಿದೆಪಿ.ಎಚ್.ಚವಾಣ್ ಎಇಇ ಜಲಮಂಡಳಿ ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.