
ಮಸ್ಕಿ: ಪಟ್ಟಣದ ಅಂಚೆ ಕಚೇರಿ 50 ವರ್ಷ ಪೂರೈಸಿದ್ದು, ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಆದರೆ ಅಧಿಕಾರಿಗಳು ಮೌನವಹಿಸಿದ್ದಾರೆ. ಸಾರ್ವಜನಿಕರಿಗೆ ನಿತ್ಯ ಸೇವೆ ನೀಡುವ ಕಚೇರಿಯಲ್ಲಿ ನೌಕರರು ಮತ್ತು ಸಾರ್ವಜನಿಕರು ಆತಂಕದಲ್ಲಿಯೇ ತಮ್ಮ ಕೆಲಸ–ಕಾರ್ಯಗಳನ್ನು ನಿರ್ವಹಿಸಬೇಕಿದೆ.
ಮಳೆಗಾಲ್ಲಿ ಚಾವಣಿ ಸೋರುತ್ತದೆ. ಮಳೆ ಹೆಚ್ಚಾದರೆ ನೀರು ಒಳನುಗ್ಗಿ, ಕಚೇರಿ ಒಳಭಾಗ ನೀರಿನಿಂದ ಆವೃತವಾಗುತ್ತದೆ. ದಾಖಲೆಗಳು ತೇವವಾಗಿ ಹಾನಿಯಾಗುತ್ತವೆ. ಉಪಕರಣಗಳು ಕಾರ್ಯನಿರ್ವಹಿಸುವುದಿಲ್ಲ. ನೌಕರರು ನೀರಿನಲ್ಲಿಯೇ ಕುಳಿತು ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮೆಟ್ಟಿಲುಗಳ ಬಳಿ ಕಸ ಮತ್ತು ಚರಂಡಿ ನೀರು ತುಂಬಿಕೊಂಡು ಸಾರ್ವಜನಿಕರು ಒಳ ಪ್ರವೇಶಕ್ಕೂ ಕಷ್ಟಪಡುವಂತಾಗಿದೆ.
ಕಟ್ಟಡದ ಮುಂಭಾಗದ ಸಿಮೆಂಟ್ ಕಳಚಿ ಬಿದ್ದಿದ್ದು, ಸರಳುಗಳು ಕಾಣುತ್ತಿವೆ. ಮೇಲಿನ ಚಾವಣಿ ಬಿಳುತ್ತಿರುವ ಹಂತಕ್ಕೆ ಬಂದಿದೆ. ಕಚೇರಿಯ ಸುತ್ತಮುತ್ತ ಅಸಮರ್ಪಕ ಪರಿಸರದಿಂದ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯರು ಅಂಚೆ ಇಲಾಖೆಯ ಮೇಲಧಿಕಾರಿಗಳ ಗಮನ ಸೆಳೆಯುತ್ತ, ‘ಮಸ್ಕಿ ಅಂಚೆ ಕಚೇರಿ ಪುನರ್‌ನಿರ್ಮಾಣ ಅಥವಾ ದುರಸ್ತಿ ತುರ್ತು ಅಗತ್ಯವಾಗಿದೆ’ ಎಂದು ಆಗ್ರಹಿಸುತ್ತಿದ್ದಾರೆ. ಸಾರ್ವಜನಿಕರಿಗೂ, ನೌಕರರಿಗೂ ಸುರಕ್ಷಿತ ಹಾಗೂ ಸ್ವಚ್ಛ ವಾತಾವರಣ ಒದಗಿಸಲು ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಮಸ್ಕಿಯ ಅಂಚೆ ಕಚೇರಿಗೆ 50 ವರ್ಷ ಪೂರ್ಣಗೊಂಡಿದೆ. ಕಚೇರಿ ಶಿಥಿಲಾವಸ್ಥೆ ತಲುಪಿದ್ದು ಮೇಲಧಿಕಾರಿಗಳು ಕಟ್ಟಡದತ್ತ ಗಮನ ಹರಿಸಬೇಕಾಗಿದೆ.– ಕೃಷ್ಣ ಡಿ. ಚಿಗರಿ, ಪುರಸಭೆ ಸದಸ್ಯ ಮಸ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.