ADVERTISEMENT

ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಾಗಲಿ: ನ್ಯಾ.ಅಂಜಾರಿಯಾ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 14:21 IST
Last Updated 1 ಮಾರ್ಚ್ 2025, 14:21 IST
ಲಿಂಗಸುಗೂರು ತಾಲ್ಲೂಕು ನ್ಯಾಯಾಲಯಗಳ ಸಂಕೀರ್ಣವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಉದ್ಘಾಟಿಸಿದರು
ಲಿಂಗಸುಗೂರು ತಾಲ್ಲೂಕು ನ್ಯಾಯಾಲಯಗಳ ಸಂಕೀರ್ಣವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಉದ್ಘಾಟಿಸಿದರು   

ಲಿಂಗಸುಗೂರು: ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಾಗಬೇಕು ಎಂಬುದು ನ್ಯಾಯಾಂಗ ವ್ಯವಸ್ಥೆ ಉದ್ದೇಶವಾಗಿದೆ’ ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹೇಳಿದರು.

ಪಟ್ಟಣದಲ್ಲಿ ಶನಿವಾರ ತಾಲ್ಲೂಕು ನ್ಯಾಯಾಲಯಗಳ ನೂತನ ಸಂಕೀರ್ಣ, ವಕೀಲರ ಭವನ, ನ್ಯಾಯಾಧೀಶರ ವಸತಿ ಗೃಹಗಳ ಉದ್ಘಾಟನೆ ಹಾಗೂ ಇ-ಸೇವಾ ಕೇಂದ್ರ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

‘ನ್ಯಾಯಾಲಯ ಸಂಕೀರ್ಣದಲ್ಲಿ ಮೂಲಸೌಕರ್ಯ, ಆಧುನಿಕ ತಂತ್ರಜ್ಞಾನ ಮತ್ತು ಅನುಕೂಲಕರ ಕೆಲಸದ ವಾತಾವರಣದ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ನ್ಯಾಯಾಧೀಶರು ನ್ಯಾಯದಾನ ಮಾಡುವ ನಿಷ್ಪಕ್ಷವಾತವಾಗಿ ಕೆಲಸ ಮಾಡಬೇಕು. ವಕೀಲರು ಕಕ್ಷಿದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇಲ್ಲಿನ ಸೌಲಬ್ಯಗಳನ್ನು ಕಾಪಾಡುವುದು ನ್ಯಾಯಾಧೀಶ, ವಕೀಲರ ಕರ್ತವ್ಯ. ಅತಿ ಶೀಘ್ರವೇ ನ್ಯಾಯಾಲಯದ ಕಾರ್ಯ–ಕಲಾಪಗಳು ಆರಂಭವಾಗಬೇಕು. ಇ-ಸೇವಾ ಕೇಂದ್ರ ಇನ್ನೂ ಮೂರು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ’ ಎಂದರು.

ADVERTISEMENT

‘ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮಲದಕಲ್ ಗ್ರಾಮದಲ್ಲಿ ಬಡಕುಟಂಬದಲ್ಲಿ ಹುಟ್ಟಿ ಬೆಳೆದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ ಶಿವರಾಜ ಪಾಟೀಲ ಅವರ ಜೀವನ, ಪಯಣ ನಮಗೆ ಸ್ಪೂರ್ತಿಯಾಗಿದೆ’ ಎಂದರು.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ಮತ್ತು ಗಡಿ ಮತ್ತು ನದಿ ಸಂರಕ್ಷಣಾ ಆಯೋಗ ಅಧ್ಯಕ್ಷ ಶಿವರಾಜ ಪಾಟೀಲ ಮಾತನಾಡಿ, ‘ಆಸ್ಪತ್ರೆಗಳು ಮತ್ತು ಕೋರ್ಟ್‌ಗಳಿಗೆ ನೋವು, ಸಮಸ್ಯೆಗಳು ಇದ್ದವರೇ ಹೆಚ್ಚಾಗಿ ಬರುತ್ತಾರೆ. ಅಂತಹವರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ವಕೀಲರು ಈ ವೃತ್ತಿಯನ್ನು ವ್ಯಾಪಾರೀಕರಣ ಮಾಡದೇ ಸೇವಾ ರೂಢಿಸಿಕೊಳ್ಳಬೇಕು.   ನೋವಿನಿಂದ ಕೋರ್ಟ್‌ಗೆ ಬಂದವರು ನಗುವಿನಿಂದ ಹೊರಬರಬೇಕು ಅಂತಹ ಕೆಲಸ ಇಲ್ಲಿ ನಡೆಯಬೇಕು’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘371 (ಜೆ) ಕಾನೂನು ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ನೀಡುವ ಮೂಲಕ ಪ್ರಗತಿಯತ್ತ ಸಾಗುತ್ತಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಈ ಮೂರು ಅಂಗಗಳು ಸಾರ್ವಜನಿಕರ ಹಿತ ಕಾಯುವ ಕೆಲಸ ಮಾಡುತ್ತಿವೆ’ ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತ ನ್ಯಾಯಾಧೀಶೆ ಎಂ.ಜಿ.ಉಮಾ, ಜಿಲ್ಲಾ ಪ್ರಧಾನ ನ್ಯಾಯಾಧೀಶ ಮಾರುತಿ ಬಗಾದೆ, ಶಾಸಕ ಮಾನಪ್ಪ ವಜ್ಜಲ, ಎಂಎಲ್‌ಸಿಗಳಾದ ಶರಣಗೌಡ ಪಾಟೀಲ ಬಯ್ಯಾಪುರ, ಎ.ವಸಂತ ಕುಮಾರ, ಜಿಲ್ಲಾಧಿಕಾರಿ ಕೆ.ನಿತೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಹೈಕೋರ್ಟ್ ರಿಜಿಸ್ಟಾರ್ ಜನರಲ್ ಕೆ.ಎಸ್.ಭರತ್ ಕುಮಾರ, ವಕೀಲರಾದ ಬಿ.ಬಿ.ಜಕಾತಿ, ಮಂಜುಳಾ ಉಂಡಿ, ಕೆ.ಅಂಬಣ್ಣ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಭೂಪನಗೌಡ ಪಾಟೀಲ, ಕಾರ್ಯದರ್ಶಿ ಬಾಲರಾಜಸಾಗರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.