ADVERTISEMENT

ಶಿಕ್ಷಣ ಸಂಸ್ಥೆ ಮುಖ್ಯಸ್ಥರ, ಆಟೋ ಚಾಲಕರ ಸಭೆ 

ಮಕ್ಕಳ ಸುರಕ್ಷತಾ ಕ್ರಮಗಳ ಪಾಲನೆಗೆ ಎಸ್‌ಪಿ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 15:55 IST
Last Updated 8 ಜನವರಿ 2020, 15:55 IST
ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಹಾಗೂ ಆಟೋ ಚಾಲಕರ ಸಭೆಯಲ್ಲಿ ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿದರು
ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಹಾಗೂ ಆಟೋ ಚಾಲಕರ ಸಭೆಯಲ್ಲಿ ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿದರು   

ರಾಯಚೂರು:ಆಟೋಗಳಲ್ಲಿ ಆರಕ್ಕಿಂತ ಹೆಚ್ಚಿನ ಮಕ್ಕಳನ್ನು ಕರೆದುಕೊಂಡು ಹೋಗುವಂತಿಲ್ಲ. ಆಟೋ, ಮ್ಯಾಕ್ಸಿಕ್ಯಾಬ್ ಸೇರಿದಂತೆ ಇತರೆ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಶಾಲೆಯ ಮುಖ್ಯದ್ವಾರದ ಮುಂದೆ ನಿಲ್ಲಿಸದೆ, ಶಾಲೆಯ ಆವರಣದಲ್ಲಿ ಸುರಕ್ಷಿತವಾಗಿ ಬಿಡಬೇಕು ಎಂದುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲೆಯ ಮುಖ್ಯಗುರುಗಳು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಆಟೋ ಚಾಲಕರು ಮತ್ತು ಮಾಲಿಕರ ಸಭೆಯಲ್ಲಿ ಮಾತನಾಡಿದರು.

ಒಂದು ವೇಳೆ ಗೇಟ್ ಮುಂಭಾಗದ ರಸ್ತೆಯಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಪಡಿಸಿದ ಮಾಲಿಕರು ಮತ್ತು ಆಟೋ, ಮ್ಯಾಕ್ಸಿಕ್ಯಾಬ್ ಚಾಲಕರು ಮತ್ತು ಮಾಲೀಕರ ವಿರುದ್ಧವೂ ನಿರ್ದಾಕ್ಷಿಣವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

ಶಾಲೆಯ ಮುಖ್ಯಗುರುಗಳು ಅಥವಾ ಸಂಸ್ಥೆಯ ಮುಖ್ಯಸ್ಥರು ತಮ್ಮ ಶಾಲೆಯ ಆವರಣದಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸದೆ ಇದ್ದಲ್ಲಿ ಮೊದಲು ₹5 ಸಾವಿರ ದಂಡ ಹಾಗೂ ಎರಡನೇ ಅವಧಿಗೆ ₹10 ಸಾವಿರ ದಂಡ ವಿಧಿಸಲಾಗುತ್ತದೆ. ಆದರೂ ಸಿಸಿಟಿವಿ ಅಳವಡಿಸದಿದ್ದಲ್ಲೆ ಸಂಸ್ಥೆಯ ಅನುಮತಿ ರದ್ದುಪಡಿಸಲು ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗುವುದು ಎಂದರು.

ಮಕ್ಕಳ ಅಪಹರಣ ಇತರೆ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 9480803800 ಸಂಪರ್ಕಿಸಬೇಕು. ಆಟೋ, ಮ್ಯಾಕ್ಸಿಕ್ಯಾಬ್ ಸೇರಿದಂತೆ ಇನ್ನಿತರ ವಾಹನಗಳ ಚಾಲಕರು ಮತ್ತು ಮಾಲೀಕರು ತಮ್ಮ ವಾಹನಗಳಲ್ಲಿ ದಾಖಲಾತಿಗಳನ್ನು ಕಡ್ಡಾಯವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಸರಕು ವಾಹನಗಳಲ್ಲಿ ಮಕ್ಕಳನ್ನು ಕರದುಕೊಂಡು ಹೋಗುವಂತಿಲ್ಲ. ಹಾಗೆನಾದರೂ ಕಂಡುಬಂದಲ್ಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದೇ ರೀತಿ ಲಿಂಗಸೂಗೂರು, ಸಿಂಧನೂರು ಉಪವಿಭಾಗ ಹಾಗೂ ಎಲ್ಲ ಠಾಣೆಗಳಲ್ಲಿ ಸಹ ಸಭೆಯನ್ನು ಆಯೋಜಿಸಿ ಜಾಗೃತಿ ಮೂಡಿಸಬೇಕು ಎಂದರು.

ಡಿವೈಎಸ್‌ಪಿ ಶೀಲವಂತ, ಸಿಪಿಐ, ಪಿಎಸ್‌ಐ, ಆರ್‌ಟಿಒ ಅಧಿಕಾರಿ, ವಾಯುಮಾಲಿನ್ಯ ತಪಾಸಣೆ ಅಧಿಕಾರಿ, ಶಾಲೆಯ ಮುಖ್ಯಗುರುಗಳು, ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.