ರಾಯಚೂರು: ಬಿಸಿಯೂಟ ನೌಕರರ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿದರು.
ನಗರದ ಸಾರ್ವಜನಿಕ ಉದ್ಯಾನದಿಂದ ಮೆರವಣಿಗೆ ಆರಂಭಿಸಿ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಕೇಂದ್ರ ಬಸ್ ನಿಲ್ದಾಣ, ನಗರಸಭೆ ಕಚೇರಿ ಮಾರ್ಗವಾಗಿ ಟಿಪ್ಪುಸುಲ್ತಾನ್ ಉದ್ಯಾನದ ವರೆಗೆ ಆಗಮಿಸಿದರು. ನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.
ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಆರಂಭವಾಗಿ 24 ವರ್ಷ ಕಳೆದಿದೆ. ಲಕ್ಷಾಂತರ ಮಕ್ಕಳಿಗೆ ಹಾಲು, ಶಾಲಾ ಸ್ವಚ್ಛತೆ, ಬಿಸಿಯೂಟ ನೀಡಿ ಮಕ್ಕಳನ್ನು ಶಾಲೆಗೆ ಕರೆತರುವ ಜೊತೆಗೆ ಮಕ್ಕಳ ಪೌಷ್ಟಿಕಾಂಶ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಆದರೆ ಸರ್ಕಾರ ಕನಿಷ್ಠ ವೇತನ ಹಾಗೂ ಸೌಲಭ್ಯ ನೀಡುತ್ತಿಲ್ಲ ಎಂದು ದೂರಿದರು.
ಉತ್ತರಪ್ರದೇಶ ಮತ್ತು ಪಂಜಾಬ ರಾಜ್ಯ ಹೈಕೋರ್ಟ್ ತೀರ್ಮಾನಿಸಿದಂತೆ ವರ್ಷದ 12 ತಿಂಗಳು ಕೆಲಸ ಮತ್ತು ಕನಿಷ್ಠ ಕೂಲಿ ಜಾರಿ ಮಾಡಬೇಕು. ಎಂಡಿಎಂ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಬೇಕು. ಕ್ಲಸ್ಟರ್ ಸಭೆಗಳನ್ನು ಕಡ್ಡಾಯವಾಗಿ ಪ್ರತಿ ಜಿಲ್ಲೆಯಲ್ಲಿ ನಡೆಸಬೇಕು. ಕೆಲಸದ ಅವಧಿಯನ್ನು ಬದಲಾಯಿಸಬೇಕು. 4 ಗಂಟೆಯಿಂದ 6 ಗಂಟೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು ಎಂದು ಮನವಿ ಮಾಡಿದರು.
ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ನಡೆಸಬೇಕು. ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ ₹25 ಲಕ್ಷ ಪರಿಹಾರ ನೀಡಬೇಕು. ಮಾರ್ಚ್ 31, 2024 ಕ್ಕೆ ಬಿಸಿ ಯೂಟ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೋಲೆಯನ್ನು ಬದಲಾಯಿಸಿ ಎಪ್ರೀಲ್ 10, 2024ಕ್ಕೆ ಮರು ಆದೇಶ ನೀಡಬೇಕು. 2023ರಲ್ಲಿ ಘೋಷಣೆ ಮಾಡಿದ ₹6000 ಗೌರವಧನ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ನಿಲ್ಲಬೇಕು. ಬಿಸಿಯೂಟ ಯೋಜನೆಯನ್ನು ಕಾಯಂ ಮಾಡಬೇಕು ಅಲ್ಲಿಯವರೆಗೆ 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಕಾರ್ಮಿಕರೆಂದು ಗುರುತಿಸಬೇಕು ಎಂದು ಒತ್ತಾಯಿಸಿದರು.
ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಕೊಡಬಾರದು. ಶಾಲೆಗಳಲ್ಲಿ ಗ್ರೂಪ್ ಡಿ ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾ ಸ್ವಚ್ಛತೆ, ಕೈತೋಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ ನೌಕರರಿಗೆ ಶಾಲಾ ಸಿಬ್ಬಂದಿಗಳೆಂದು ನೇಮಿಸಿ ನೇಮಕಾತಿ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ದಸರಾ ರಜೆಗಳ ವೇತನವನ್ನು ಕಡ್ಡಾಯವಾಗಿ ನೀಡಬೇಕು. ಶಾಲಾ ಅವಧಿಯ ನಂತರ ನರೆಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸ ಅವರಿಗೆ ನೀಡಿ ಈ ಯೋಜನೆಯಿಂದ ವೇತನ ನೀಡಬೇಕು, ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿ ಕುಟುಂಬದವರಿಗೆ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರೇಣುಕಮ್ಮ, ಮರಿಯಮ್ಮ, ಮಹಮ್ಮದ್ ಹನೀಫ್, ರಮೇಶ ವೀರಾಪೂರ, ವರಲಕ್ಷ್ಮೀ, ಕಲ್ಯಾಣಮ್ಮ, ನಾಗಮ್ಮ ಡಿ.ಎಸ್.ಶರಣ ಬಸವ, ವಿಶಾಲಾಕ್ಷಮ್ಮ, ಶರಣಮ್ಮ ಪಾಟೀಲ, ರೇಣುಕಮ್ಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.