ADVERTISEMENT

ಮರಳಿ ಊರಿಗೆ ಬಂದ ಕಾರ್ಮಿಕರು

ಗ್ರಾಮಗಳ ಜನರಲ್ಲಿ ಭಯ: ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 13:25 IST
Last Updated 30 ಏಪ್ರಿಲ್ 2021, 13:25 IST
ಲಿಂಗಸುಗೂರು ತಾಲ್ಲೂಕು ಗೋನವಾಟ್ಲ ತಾಂಡಾಕ್ಕೆ ನಗರ ಪ್ರದೇಶಗಳಿಂದ ಬಂದ ಕೂಲಿ ಕಾರ್ಮಿಕರನ್ನು ಆಶಾ ಕಾರ್ಯಕರ್ತೆ ತಪಾಸಣೆಗೆ ಒಳಪಡಿಸಿದರು
ಲಿಂಗಸುಗೂರು ತಾಲ್ಲೂಕು ಗೋನವಾಟ್ಲ ತಾಂಡಾಕ್ಕೆ ನಗರ ಪ್ರದೇಶಗಳಿಂದ ಬಂದ ಕೂಲಿ ಕಾರ್ಮಿಕರನ್ನು ಆಶಾ ಕಾರ್ಯಕರ್ತೆ ತಪಾಸಣೆಗೆ ಒಳಪಡಿಸಿದರು   

ಲಿಂಗಸುಗೂರು: ರಾಜ್ಯದ ಪ್ರಮುಖ ನಗರಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಗುಳೆ ಹೋಗಿದ್ದ ಕೂಲಿ ಕಾರ್ಮಿಕರು ಊರಿಗೆ ಮರಳುತ್ತಿದ್ದಾರೆ.

ರಾಜ್ಯದ ಬೆಂಗಳೂರು, ಮಂಗಳೂರು, ಬೆಳಗಾವಿ, ಉಡುಪಿ ಸೇರಿದಂತೆ ಹೊರ ರಾಜ್ಯಗಳ ಸೊಲ್ಲಾಪುರ, ಪುಣೆ, ಮುಂಬೈ ಹಾಗೂ ಇತರ ನಗರಗಳಿಂದ ಕಾರ್ಮಿಕರು ಬರುತ್ತಿದ್ದಾರೆ. ನೇರವಾಗಿ ಗ್ರಾಮ, ತಾಂಡಾಗಳನ್ನು ಸೇರುತ್ತಿದ್ದಾರೆ.

ನಿರೀಕ್ಷಿತ ಪ್ರಮಾಣದಲ್ಲಿ ಆರೋಗ್ಯ ತಪಾಸಣೆ ನಡೆಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ADVERTISEMENT

ಪೈದೊಡ್ಡಿ, ಗೌಡೂರು, ಗುರುಗುಂಟಾ, ಗೋನವಾಟ್ಲ, ಗುಂತಗೋಳ, ಸರ್ಜಾಪುರ ಸೇರಿ ಕೆಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ದೊಡ್ಡಿ, ತಾಂಡಾ, ಹಟ್ಟಿ, ಗ್ರಾಮಗಳಿಗೆ ಭಾರಿ ಸಂಖ್ಯೆಯ ಕಾರ್ಮಿಕರು ಬರುತ್ತಿದ್ದಾರೆ. ಜನತೆ ಭಯಗೊಂಡಿದ್ದಾರೆ.

ಕಳೆದ ವರ್ಷ ವಲಸೆ ಹೋದವರು ವಾಪಸ್ ಬಂದಾಗ ಅಂಥವರ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಸ್ಥಳೀಯ ಕೋವಿಡ್‍ ಆರೈಕೆ ಕೇಂದ್ರಗಳಲ್ಲಿ ಕ್ವಾರಂಟೈನ್‍ ಮಾಡಲಾಗುತ್ತಿತ್ತು. ನಂತರದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಕೋವಿಡ್‍ ಲಕ್ಷಣಗಳು ಇಲ್ಲದ್ದನ್ನು ದೃಢಪಡಿಸಿದ ನಂತರ ಅವರವರ ತಾಂಡಾ, ದೊಡ್ಡಿ, ಗ್ರಾಮಗಳಿಗೆ ಕಳುಹಿಸಿ ಕೊಡಲಾಗುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ಕುರಿತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ ಅವರನ್ನು ಸಂಪರ್ಕಿಸಿದಾಗ, ‘ಕೆಲ ದಿನಗಳಿಂದ ವಲಸೆ ಹೋದವರು ಮರಳಿ ಸ್ವಗ್ರಾಮಗಳಿಗೆ ಬರುತ್ತಿರುವುದು ನಿಜ. ಅಂಥವರ ಆರೋಗ್ಯ ಲಕ್ಷಣಗಳ ಮೇಲೆ ನಿಗಾ ವಹಿಸಿದ್ದೇವೆ. ಸದ್ಯ ಅಂದಾಜು 600 ವಲಸೆ ಕಾರ್ಮಿಕರು ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಿಗೆ ಬಂದಿದ್ದಾರೆ. ಕೋವಿಡ್‍ ಲಕ್ಷಣಗಳು ಕಂಡು ಬಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.