ADVERTISEMENT

ಮಾನ್ವಿ: ಕಲಬೆರಕೆ ಪತ್ತೆಗೆ ಹಾಲಿನ ಮಾದರಿ ಸಂಗ್ರಹ

ಸಗಟು ಹಾಲು ಸಂಗ್ರಹ ಕೇಂದ್ರ, ಡೇರಿಗಳಿಗೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಭೇಟಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 7:31 IST
Last Updated 5 ಆಗಸ್ಟ್ 2025, 7:31 IST
ಮಾನ್ವಿ ತಾಲ್ಲೂಕಿನ ಅಮರೇಶ್ವರ ಕ್ಯಾಂಪಿನ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ ಬನದೇಶ್ವರ ವೈ. ಭೇಟಿ ನೀಡಿ ಹಾಲಿನ ಮಾದರಿ ಸಂಗ್ರಹಿಸಿದರು
ಮಾನ್ವಿ ತಾಲ್ಲೂಕಿನ ಅಮರೇಶ್ವರ ಕ್ಯಾಂಪಿನ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ ಬನದೇಶ್ವರ ವೈ. ಭೇಟಿ ನೀಡಿ ಹಾಲಿನ ಮಾದರಿ ಸಂಗ್ರಹಿಸಿದರು   

ಮಾನ್ವಿ: ಹಾಲಿನಲ್ಲಿ ಕಲಬೆರಕೆ ಪತ್ತೆ ಸಂಬಂಧ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ ಹಾಲಿನ ಮಾದರಿಗಳನ್ನು ಸಂಗ್ರಹಿಸಿ, ಗುಣಮಟ್ಟದ ಪರೀಕ್ಷೆ ಹಾಗೂ ವಿಶ್ಲೇಷಣೆಗೆ ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ.

ಆಗಸ್ಟ್ 1 ಮತ್ತು 2ರಂದು‌ ಜಿಲ್ಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಎಫ್) ಸಹಯೋಗದಲ್ಲಿ ಸಗಟು ಹಾಲು ಸಂಗ್ರಹ ಕೇಂದ್ರ ಹಾಗೂ ಖಾಸಗಿ ಹಾಲಿನ ಡೇರಿಗಳಿಗೆ ತೆರಳಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ.

ಮಾನ್ವಿ ತಾಲ್ಲೂಕಿನ ಅಮರೇಶ್ವರ ಕ್ಯಾಂಪ್ ಹಾಲು ಉತ್ಪಾದಕರ ಸಂಘ, ಜಾಲಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಾಲ್ಕು ಮಾದರಿಗಳು, ಮೂರು ಖಾಸಗಿ ಹಾಲಿನ ಡೇರಿಗಳಲ್ಲಿ ಐದು ಮಾದರಿಗಳನ್ನು ಸಂಗ್ರಹಿಸಿದ್ದಾರೆ.

ADVERTISEMENT

ಸಂಗ್ರಹಿಸಿದ ಒಟ್ಟು ಒಂಬತ್ತು ಮಾದರಿಗಳಲ್ಲಿ ಎರಡು ಮಾದರಿಗಳನ್ನು ಕೆಎಂಎಫ್ ಪ್ರಯೋಗಾಲಯ, ಐದು ಮಾದರಿಗಳನ್ನು ಮೈಸೂರಿನ ಆಹಾರ ಸುರಕ್ಷತಾ ಇಲಾಖೆಯ ವಿಭಾಗೀಯ ಪ್ರಯೋಗಾಲಯ, ಎರಡು ಮಾದರಿಗಳನ್ನು ಬೆಳಗಾವಿಯ ವಿಭಾಗೀಯ ಪ್ರಯೋಗಾಲಯಕ್ಕೆ ಗುಣಮಟ್ಟದ ಪರೀಕ್ಷೆ ಮತ್ತು ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.

ಜಿಲ್ಲೆಯಾದ್ಯಂತ ಒಟ್ಟು 30 ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗುಣಮಟ್ಟದ ಹಾಲು ಪೂರೈಕೆಗಾಗಿ ಆಹಾರ ಸುರಕ್ಷತಾ ಇಲಾಖೆ ಮಾದರಿ ಸಂಗ್ರಹಕ್ಕೆ ಮುಂದಾಗಿರುವ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಶುದ್ಧ ಕುಡಿಯುವ ನೀರು ಮಾರಾಟ ಮಾಡುವ ಘಟಕಗಳಿಗೂ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಆಹಾರ ಸುರಕ್ಷತಾ ಇಲಾಖೆಯ ಆದೇಶದಂತೆ ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ
ಬನದೇಶ್ವರ ವೈ. ಆಹಾರ ಸುರಕ್ಷತಾ ಅಧಿಕಾರಿ ಮಾನ್ವಿ
ಸಾರ್ವಜನಿಕರಿಗೆ ಪೂರೈಕೆಯಾಗುವ ಹಾಲಿನಲ್ಲಿ ಕಲಬೆರಕೆ ಪತ್ತೆಗೆ ಗುಣಮಟ್ಟದ ಪರೀಕ್ಷೆ ಹಾಗೂ ವಿಶ್ಲೇಷಣೆಗೆ ಮುಂದಾಗಿರುವ ಆಹಾರ ಸುರಕ್ಷತಾ ಇಲಾಖೆಯ ಕ್ರಮ ಸ್ವಾಗತಾರ್ಹ
ಎ.ಶರಣಕುಮಾರ ಮುದ್ದಮಗುಡ್ಡಿ ಸಾಮಾಜಿಕ ಕಾರ್ಯಕರ್ತ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.