ADVERTISEMENT

ರಾಯಚೂರು: 14 ಹಳ್ಳಿಗಳ ಫಲಾನುಭವಿಗಳಿಗೆ ಮೋಟಾರ್ ಪಂಪ್‌ಸೆಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:35 IST
Last Updated 23 ಫೆಬ್ರುವರಿ 2026, 6:35 IST
ರಾಯಚೂರಲ್ಲಿ 14 ಹಳ್ಳಿಗಳ ರೈತರಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹಾಗೂ ಸಂಸದ ಜಿ. ಕುಮಾರ ನಾಯಕ ಮೋಟಾರ್ ಪಂಪ್‌ಸೆಟ್‌ ವಿತರಿಸಿದರು
ರಾಯಚೂರಲ್ಲಿ 14 ಹಳ್ಳಿಗಳ ರೈತರಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹಾಗೂ ಸಂಸದ ಜಿ. ಕುಮಾರ ನಾಯಕ ಮೋಟಾರ್ ಪಂಪ್‌ಸೆಟ್‌ ವಿತರಿಸಿದರು   

ರಾಯಚೂರು: ‘ಸಣ್ಣ ನೀರಾವರಿ ಹಾಗೂ ಅಂತರ್ಜಲ ಇಲಾಖೆಯಿಂದ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಬಡ ರೈತರನ್ನು ಗುರುತಿಸಿ ಕೊಳವೆ ಬಾವಿ ಕೊರೆಸಿ ನೀರಾವರಿ ಸೌಲಭ್ಯಕ್ಕೆ ಅನುಕೂಲ ಕಲ್ಪಿಸಲು ಫಲಾನುಭವಿಗಳಿಗೆ ಮೋಟಾರ್ ಪಂಪ್ಸೆಟ್‌ಗಳನ್ನು ವಿತರಿಸಲಾಗುತ್ತಿದೆ. ರೈತರು ಸದುಪಯೋಗ ಪಡೆಯಬೇಕು’ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

‘ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ಭಾಗದ14 ಹಳ್ಳಿಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಬೋಳಮಾನ ದೊಡ್ಡಿ ಶ್ರೀ ತಿಮ್ಮಪ್ಪ ದೇವಸ್ಥಾನದ ಬಳಿ  ಮೋಟಾರ್ ಪಂಪ್‍ಗಳನ್ನು ವಿತರಿಸಿ ಅವರು ಮಾತನಾಡಿದರು.

‘ಕಳೆದ ಎರಡೂವರೆ ವರ್ಷದಿಂದ ರಾಜ್ಯದಾದ್ಯಂತ ಅಂತರ್ಜಲ ಮಟ್ಟ ವೃದ್ಧಿಗೊಳಿಸಲು ನೀರು ಹರಿಯುವ ಪ್ರದೇಶಗಳಲ್ಲಿ ಚಕ್ ಡ್ಯಾಮ್, ಕೆರೆಗಳ ನಿರ್ಮಾಣ, ಬಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ವೈಜ್ಞಾನಿಕವಾಗಿ ಯೋಜನೆಗಳನ್ನು ರೂಪಿಸಲಾಗಿದೆ‘ ಎಂದರು.

ADVERTISEMENT

‘ರಾಯಚೂರು ಜಿಲ್ಲೆ ಅತಿ ಹೆಚ್ಚು ಅಂತರ್ಜಲ ಉಪಯೋಗ ಮಾಡುವುದರಲ್ಲಿ ರಾಷ್ಟ್ರದಲ್ಲಿಯೇ 9 ನೇ ಸ್ಥಾನದಲ್ಲಿದೆ. ನಮ್ಮ ಇಲಾಖೆಯ ವೈಜ್ಞಾನಿಕ ಯೋಜನೆಗಳ ಅನುಷ್ಠಾನದಿಂದ ಪ್ರಸ್ತುತ ಶೇಕಡ 2ರಷ್ಟು ಅಂತರ್ಜಲ‌ ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಕೊಳವೆ ಬಾವಿ ಮೂಲಕ ಸಣ್ಣ ಭೂ ಹಿಳುವಳಿದಾರರು ಹನಿ ನೀರಾವರಿ, ತುಂತುರು ನೀರಾವರಿ ಸೌಲಭ್ಯ ಪಡೆಯಬೇಕು. ಕೃಷಿ ಮಿಶ್ರ ಬೆಳೆ ಪದ್ದತಿ ಅನುಸರಿಸಿ ಹೆಚ್ಚಿನ ಲಾಭ ಪಡೆದುಕೊಳ್ಳಲು ಪ್ರಯತ್ನಿಸಬೇಕು‘ ಎಂದು ಹೇಳಿದರು.

ಸಂಸದ ಜಿ.ಕುಮಾರನ ನಾಯಕ ಅವರೂ ರೈತರಿಗೆ ಪಂಪ್‌ಸೆಟ್‌ಗಳ ವಿತರಣೆ ಮಾಡಿದರು. ಕಾಂಗ್ರೆಸ್ ಮುಖಂಡ ಮೊಹಮ್ಮದ್ ಶಾಲಂ, ಜಯಣ್ಣ, ನರಸಿಂಹಲು ಮಾದಗಿರಿ ಕುರುಬ ದೊಡ್ಡಿ ಆಂಜನೇಯ, ಜಿ ಶಿವಮೂರ್ತಿ, ಅಮರೇಗೌಡ ಹಂಚಿನಾಳ  ತಾಯಣ್ಣ, ಬಿ ರಮೇಶ, ಮಹಾದೇವ, ತಿಮ್ಮಪ್ಪ, ಹನುಮಂತ, ಗೋವಿಂದಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.