ADVERTISEMENT

ರಾಯಚೂರು | ವಸತಿ ನಿಲಯಗಳ ಅನುದಾನ ದುರ್ಬಳಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 15:48 IST
Last Updated 29 ಸೆಪ್ಟೆಂಬರ್ 2024, 15:48 IST

ರಾಯಚೂರು: ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ 2020–21ರಿಂದ 2024–25ನೇ ಸಾಲಿನ ವರೆಗೆ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಒದಗಿಸದೆ ಬೇನಾಮಿ ಫಾರ್ಮ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಅವ್ಯವಹಾರ ನಡೆದಿದ್ದು  ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಬಣ)ಯ ಜಿಲ್ಲಾ ಘಟಕದ ಪದಾಧಿಕಾರಿಗಳು ವಿಧಾನ ಮಂಡಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣ ಸಮಿತಿ ಅಧ್ಯಕ್ಷರಿಗೆ ಈಚೆಗೆ ಮನವಿ ಸಲ್ಲಿಸಿದರು.

ಐದು ತಾಲ್ಲೂಕುಗಳಲ್ಲಿ ಸುಮಾರು 70 ವಸತಿ ನಿಲಯಗಳು ಇದ್ದು, ಸುಮಾರು ಆರು ಸಾವಿರ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಪ್ರವೇಶ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸದೆ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಬೇನಾಮಿ ಫಾರ್ಮಗಳ ಹೆಸರಿನಲ್ಲಿ ಬೋಗಸ್ ಬಿಲ್‌ಗಳನ್ನು ಸೃಷ್ಠಿಸಿ ಕೋಟಿಗಟ್ಲಲೇ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಅವ್ಯವಹಾರದ ಕುರಿತು ತನಿಖೆಗೆ ತಂಡ ರಚನೆ ಮಾಡಬೇಕು. ಜಿಲ್ಲೆಯ ಐದು ತಾಲ್ಲೂಕಗಳ ಕಚೇರಿಗಳಲ್ಲಿ ಸಮಗ್ರ ಕಡತ ಪರಿಶೀಲನೆ ಮಾಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈಶ್ವರ ಯಕ್ಲಾಸಪೂರು, ನಗರ ಘಟಕದ ಅಧ್ಯಕ್ಷ ವೆಂಕಟೇಶ ರಾಂಪೂರು, ಎ.ರಮೇಶ ವಡವಾಟಿ, ಸವಾರಪ್ಪ ವಡವಾಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.