ಮಾನ್ವಿ: ‘ತಾಲ್ಲೂಕಿನ ಸುಂಕೇಶ್ವರ ಗ್ರಾಮ ಪಂಚಾಯಿತಿಯಲ್ಲಿ ₹1.16 ಕೋಟಿ ಅನುದಾನ ದುರ್ಬಳಕೆ ಮಾಡಿಕೊಂಡ ಕುರಿತು ಆರು ತಿಂಗಳ ಹಿಂದೆ ದೂರು ಸಲ್ಲಿಸಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಮೇಲಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷ ಹನುಮೇಶ ನಾಯಕ ಸಾದಾಪುರ ಆರೋಪಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಸುಂಕೇಶ್ವರ ಗ್ರಾಮ ಪಂಚಾಯಿತಿಯಲ್ಲಿ 2022-23 ಮತ್ತು 2023-24ನೇ ಸಾಲಿನ 15ನೇ ಹಣಕಾಸು ಯೋಜನೆ ಹಾಗೂ ನರೇಗಾ ಯೋಜನೆಯ ಕೋಟ್ಯಂತರ ರೂಪಾಯಿ ಅನುದಾನ ದುರ್ಬಳಕೆಯಾಗಿದೆ. ವಿದ್ಯುತ್ ದೀಪಗಳ ಅಳವಡಿಕೆ, ಕುಡಿಯುವ ನೀರಿನ ಕೊಳವೆ ಬಾವಿ ದುರಸ್ತಿ ಹಾಗೂ ಜಂಗಲ್ ಕಟಿಂಗ್ ಮತ್ತಿತರ ಕಾಮಗಾರಿಗಳ ಹೆಸರಿನಲ್ಲಿ ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ಪಡೆಯದೆ ವೆಂಡರ್‌ಗಳ ಹೆಸರಿನಲ್ಲಿ ಬಿಲ್ ಪಾವತಿಸಲಾಗಿದೆ. ಗ್ರಾ.ಪಂ ಅಧ್ಯಕ್ಷ ಹಾಗೂ ಪಿಡಿಒ ನಾಗಭೂಷಣ ಕಾಂಬ್ಳೆ ಶಾಮೀಲಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ಅನುದಾನ ಲೂಟಿ ಮಾಡಿದ್ದಾರೆ’ ಎಂದು ದೂರಿದರು.
ಗ್ರಾಮ ಪಂಚಾಯಿತಿಗೆ ಮಂಜೂರಾದ ಅನುದಾನವನ್ನು ಸಿಂಧನೂರು ಏಜೆನ್ಸೀಸ್, ಮಾನ್ವಿ ಏಜೆನ್ಸೀಸ್ ಹೆಸರಿನಲ್ಲಿ ಅಕ್ರಮವಾಗಿ ಹಣ ಪಾವತಿಸಲಾಗಿದೆ. ನರೇಗಾ ಕೂಲಿ ಹಣವನ್ನು ಮೃತರ ಖಾತೆಗೆ ಪಾವತಿಸಲಾಗಿದೆ. ಈ ಕುರಿತು ಸಾಮಾಜಿಕ ಲೆಕ್ಕ ಪರಿಶೋಧನೆಗೆ ಆಗಮಿಸಿದ್ದ ಅಧಿಕಾರಿಗಳು ದೂರು ಸಲ್ಲಿಸಿರುವುದು ಗ್ರಾಮ ಪಂಚಾಯಿತಿಯ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದರು.
ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಹಂಪಯ್ಯ ನಾಯಕ, ಸಾಮಾಜಿಕ ಕಾರ್ಯಕರ್ತ ಸುಧಾಕರ ಅರೋಲಿ, ಶಿವನಯ್ಯ ಬೆಳಗಿನಪೇಟೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.