ಮಸ್ಕಿ: ‘ಜೂ.3ರಂದು ನಡೆಯಲಿರುವ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಅವರ ಗೆಲುವು ಖಚಿತ’ ಎಂದು ಶಾಸಕರೂ ಆಗಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶಿವರಾಜ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ಹಾಗೂ ಸಹಕಾರ ಸಂಸ್ಥೆಗಳ, ಸರ್ಕಾರಿ ನೌಕರರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು,‘ಹಿಂದೆ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಅಮರನಾಥ ಪಾಟೀಲ ಅವರು ಪದವೀಧರರ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತಿ ಹೋರಾಟ ಮಾಡಿ ಸ್ಪಂದಿಸಿದ್ದಾರೆ’ ಎಂದರು.
ಕಾಂಗ್ರೆಸ್‌ನಿಂದ ಕಳೆದ ಬಾರಿ ಆಯ್ಕೆಯಾಗಿದ್ದ ಡಾ.ಚಂದ್ರಶೇಖರ ಪಾಟೀಲ ಒಂದು ಬಾರಿಯೂ ಪದವೀಧರರ ಸಮಸ್ಯೆಗೆ ಸ್ಪಂದಿಸಿಲ್ಲ. ಈ ಕಡೆ ಮುಖ ಸಹ ಹಾಕಿಲ್ಲ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಮತಗಳಿಂದ ಅಮರನಾಥ ಪಾಟೀಲ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ,‘ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ಕಲಂ ಮೀಸಲಾತಿ ರದ್ದುಪಡಿಸುವಂತೆ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವ ಎಚ್.ಕೆ.ಪಾಟೀಲ ಅವರು ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ಈ ಭಾಗದ ಜನರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ’ ಎಂದರು.
ಅಭ್ಯರ್ಥಿ ಅಮರನಾಥ ಪಾಟೀಲ ಮಾತನಾಡಿ,‘ನಾನು ಶಾಸಕನಾಗಿದ್ದಾಗ ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಿದ್ದೇನೆ. ನಿತ್ಯ ಶಿಕ್ಷಕರು ಹಾಗೂ ಪದವೀಧರರೊಂದಿಗೆ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ’ ಎಂದರು.
ಪಕ್ಷದ ಬಳ್ಳಾರಿ ವಿಭಾಗದ ಪ್ರಭಾರಿ ಚಂದ್ರಶೇಖರ ಹಲಗೇರಿ, ಬಸವಂತರಾಯ ಕುರಿ, ಅಮರೇಗೌಡ ವಿರುಪಾಪುರ, ಡಾ. ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ್, ಶೇಖರಪ್ಪ ಮೇಟಿ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಂದ್ರಕಲಾ ದೇಶಮುಖ, ಮಲ್ಲಪ್ಪ ಅಂಕುಶದೊಡ್ಡಿ, ರವಿ ಜಲ್ದಾರ್, ಸಂತೋಷ ರಾಜಗುರು, ಪಕ್ಷದ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ರಮೇಶ ಉದ್ಬಾಳ, ಚಂದ್ರಕಾಂತ ಗೊಗೇಬಾಳ, ಯಲ್ಲೋಜಿರಾವ್ ಕೊರೆಕಾರ, ಜೆಡಿಎಸ್ ಮುಖಂಡ ಲಿಂಗರಾಜ ಪಾಟೀಲ ಹಾಗೂ ಮಲ್ಲಿಕಾರ್ಜುನ ಭಾವಿಕಟ್ಟಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.