ADVERTISEMENT

ಎಂಎಲ್‌ಸಿ: ರಾಯಚೂರು ಜಿಲ್ಲೆಗೆ ಬಂಪರ್‌

ಬೋಸರಾಜು, ವಸಂತಕುಮಾರ ಆಯ್ಕೆ ಖಚಿತ, ಬಸನಗೌಡ ಬಾದರ್ಲಿಗೆ ಖಾತರಿ

ಚಂದ್ರಕಾಂತ ಮಸಾನಿ
Published 3 ಜೂನ್ 2024, 6:32 IST
Last Updated 3 ಜೂನ್ 2024, 6:32 IST
ಎನ್‌.ಎಸ್‌.ಬೋಸರಾಜು
ಎನ್‌.ಎಸ್‌.ಬೋಸರಾಜು   

ರಾಯಚೂರು: ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಲ್ಯಾಣಕ್ಕೆ ಸಿಂಹಪಾಲು ದೊರೆತರೆ, ರಾಯಚೂರು ಜಿಲ್ಲೆಗೆ ಬಂಪರ್‌ ಲಭಿಸಿದೆ.

ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ದೇಶನದ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು ಜಿಲ್ಲೆಯ ಮೂವರ ಹೆಸರನ್ನು ಅಂತಿಮಗೊಳಿಸಿದ್ದಾರೆ.

ವಿಧಾನ ಪರಿಷತ್‌ ಸ್ಥಾನಗಳಿಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಹಾಲಿ ಸಚಿವ ಎನ್‌.ಎಸ್‌.ಬೋಸರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ ಹಾಗೂ ಬಸನಗೌಡ ಬಾದರ್ಲಿ ಹೆಸರು ಕೇಳಿ ಬಂದಿದ್ದವು. ಪಕ್ಷ ಕೊನೆಗೂ ಈ ಮೂವರ ಸೇವೆಯನ್ನು ಪರಿಗಣಿಸಿ ವಿಧಾನ ಪರಿಷತ್‌ಗೆ ಆಯ್ಕೆ ಮಾಡಲು ನಿರ್ಧರಿಸಿದೆ.

ಮಾನ್ವಿ ವಿಧಾನಸಭಾ ಕ್ಷೇತ್ರದಿಂದ 1999 ಹಾಗೂ 2004ರಲ್ಲಿ ಸತತ ಎರಡು ಬಾರಿ ಶಾಸಕರಾಗಿದ್ದ ಎನ್‌.ಎಸ್‌. ಬೋಸರಾಜು, 2008ರಲ್ಲಿ ಮಾನ್ವಿ ಕ್ಷೇತ್ರ ಪುನರ್‌ ವಿಂಗಡಣೆಯಾಗಿ ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ) ಮೀಸಲಾದ ಕಾರಣ ಸ್ಪರ್ಧೆಯಿಂದ ವಂಚಿತರಾಗಿದ್ದರು.

ADVERTISEMENT

2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು. ಕಳೆದ ವರ್ಷ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವರನ್ನು ಸಣ್ಣ ನೀರಾವರಿ ಇಲಾಖೆಯ ಸಚಿವರನ್ನಾಗಿ ಮಾಡುವ ಜೊತೆಗೆ ಬಾಕಿ ಉಳಿದ ಒಂದು ವರ್ಷದ ಅವಧಿಗೆ ವಿಧಾನ ಪರಿಷತ್ತಿಗೆ ಸದಸ್ಯರನ್ನಾಗಿ ಮಾಡಲಾಗಿತ್ತು. ಇದೀಗ ಅವಧಿ ಮುಗಿದ ನಂತರ ಕಾಂಗ್ರೆಸ್‌ ಹೈಕಮಾಂಡ್ ಮತ್ತೆ ಅವರ ಸಚಿವ ಸ್ಥಾನವನ್ನೂ ಭದ್ರಪಡಿಸಲು ತೀರ್ಮಾನಿಸಿದೆ.

ವಿಧಾನ ಪರಿಷತ್‌ ಚುನಾವಣೆಗೆ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ರಾಜ್ಯ ಉಸ್ತುವಾರಿ ರಂದೀಪಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಋಣಿಯಾಗಿದ್ದೇನೆ ಎಂದು ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದ್ದಾರೆ.

ವಸಂತಕುಮಾರ
ಬಸನಗೌಡ ಬಾದರ್ಲಿ

ಪಕ್ಷಕ್ಕೆ ಋಣಿಯಾಗಿರುವೆ: ವಸಂತಕುಮಾರ ‘ಅನೇಕ ವರ್ಷಗಳಿಂದ ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದಕ್ಕಾಗಿ ಪಕ್ಷವು ಮಾರ್ಚ್‌ನಲ್ಲೇ ನನನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿತು. ಇದೀಗ ವಿಧಾನ ಪರಿಷತ್‌ಗೆ ಅವಿರೋಧ ಆಯ್ಕೆ ಮಾಡಲು ಪಟ್ಟಿಯಲ್ಲಿ ನನ್ನ ಹೆಸರು ಪ್ರಕಟಿಸಿದೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ವಸಂತಕುಮಾರ ಪ್ರತಿಕ್ರಿಯಿಸಿದರು. ‘ಎಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಋಣಿಯಾಗಿದ್ದೇನೆ’ ಎಂದು ಹೇಳಿದರು.

ಪಕ್ಷ ನಿಷ್ಠೆಗೆ ಪ್ರತಿಫಲ: ಬಾದರ್ಲಿ ‘ಹದಿನೈದು ವರ್ಷಗಳಿಂದ ಕಾಂಗ್ರೆಸ್ ಕಟ್ಟಾಳಾಗಿ ನಿಷ್ಠೆ ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸಿರುವೆ. ಅಧಿಕಾರದ ಆಸೆಗೆ ಗೊಂದಲದ ತೀರ್ಮಾನ ತೆಗೆದುಕೊಳ್ಳದೆ ಸಹನೆ ಮತ್ತು ತಾಳ್ಮೆಯಿಂದ ಶ್ರಮಿಸಿದ್ದಕ್ಕೆ ಪಕ್ಷ ನನ್ನನ್ನು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಪ್ರತಿಕ್ರಿಯಿಸಿದರು. ‘ಯುವ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಅತಿಹೆಚ್ಚು ಸದಸ್ಯತ್ವ ನೋಂದಣಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದೇನೆ. ಈ ಎಲ್ಲ ಅಂಶಗಳನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿರುವುದಕ್ಕೆ ಋಣಿಯಾಗಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.