
ಮಾನ್ವಿ: ಪಟ್ಟಣದ ಝೇವಿಯರ್ ಸಿಬಿಎಸ್ಇ ಶಾಲೆ ಆವರಣದಲ್ಲಿ ಬೆಂಗಳೂರಿನ ಕ್ರಿಪ್ತಾ ಪ್ಲಾನೆಟೇರಿಯಂ ವತಿಯಿಂದ ವಿದ್ಯಾರ್ಥಿಗಳಿಗೆ ಸಂಚಾರಿ ತಾರಾಲಯದ ಮೂಲಕ ಗ್ರಹಗಳು ಹಾಗೂ ತಾರೆಗಳ ವೀಕ್ಷಣೆ ಕಾರ್ಯಕ್ರಮ ಬುಧವಾರ ಆಯೋಜಿಸಲಾಗಿತ್ತು.
ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಏರ್ಪಡಿಸಿದ್ದ ಸಂಚಾರಿ ತಾರಾಲಯದಲ್ಲಿ ಗೆಲಕ್ಸಿಗಳು, ಸೌರಮಂಡಲ ಸೇರಿದಂತೆ ಗ್ರಹ, ನಕ್ಷತ್ರ, ನಿಹಾರಿಕೆಗಳ ಅನಾವರಣವನ್ನು ಕೃತಕ ಗೋಳದೊಳಗೆ ಕುಳಿತು ಆಕಾಶವೇ ಇಳಿದಂತೆ ಕಾಣಿಸುವ ವರ್ಣಮಯ ಸನ್ನಿವೇಶಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.
ಪ್ರಾಚಾರ್ಯ ಫಾದರ್ ವಿಲ್ಸನ್ ಬೆನ್ನಿಸ್ ಮಾತನಾಡಿ,‘ಬೆಂಗಳೂರು, ಹೈದರಾಬಾದ್‌ನಂಥ ನಗರಗಳಲ್ಲಿ ಮಾತ್ರವೇ ಲಭ್ಯವಿರುವ ತಾರಾಲಯದ ಸೌಲಭ್ಯವನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸಿಗುವಂತೆ ಮಾಡಲು ಸಹಕರಿಸಿದ ಕ್ರಿಪ್ತಾ ಪ್ಲಾನೆಟೇರಿಯಂ ಸಂಸ್ಥೆಯ ಕಾರ್ಯ ಶ್ಲಾಘನೀಯ’ ಎಂದರು.
‘ವಿಜ್ಞಾನವು ನೈಜ ಅನುಭವಗಳಿಂದಲೇ ಹೆಚ್ಚು ಮನದಟ್ಟಾಗುವುದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಸಂಚಾರಿ ತಾರಾಲಯದ ಆಯೋಜನೆ ಉತ್ತಮ ಕಾರ್ಯಕ್ರಮ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
‘ನಕ್ಷತ್ರಗಳು, ಮಂಗಳನ ಅಂಗಳ, ಬಿಲಿಯಾಂತರ ವರ್ಷಗಳ ಹಿಂದೆ ಇದ್ದಿರಬಹುದಾದ ಜೀವ ಜಗತ್ತು, ಡೈನೋಸಾರ್‌ಗಳು, ಜೀವಿಗಳ ಉಗಮದ ಸಂಕ್ಷಿಪ್ತ ವಿದ್ಯುನ್ಮಾನ ಕತೆ, ಭೌತಶಾಸ್ತ್ರ, ಜೀವಶಾಸ್ತ್ರ, ಖಗೋಳ ಶಾಸ್ತ್ರ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ದೃಶ್ಯಗಳ ಮೂಲಕ ಮಾಹಿತಿ ನೀಡಲಾಯಿತು.
ಸಂಚಾರಿ ತಾರಾಲಯದ ಆಯೋಜನೆ ಬಗ್ಗೆ ಪಾಲಕರು ಮತ್ತು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.