ಮುದಗಲ್: ಗ್ರಾಮೀಣ ಭಾಗದ ಜನರ ನೀರಿನ ದಾಹ ನೀಗಿಸಲು ನಿರಂತರ ಶುದ್ಧ ನೀರು ಪೂರೈಕೆ ಮಾಡುವ ಜಲಜೀವನ್ ಮಿಷನ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಗದಿತ ಗುರಿ ಸಾಧಿಸಲು ವಿಫಲವಾಗಿದೆ.
ತಾಲ್ಲೂಕಿನ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ತಾಲ್ಲೂಕಿನ ಬ್ಯಾಲಿಹಾಳ, ರಾಮತನಾಳ, ಆನೆಹೊಸೂರು, ನಾಗರಾಳ, ಚಿತ್ತಾಪುರ, ಜೂಲಗುಡ್ಡ ಸೇರಿದಂತೆ ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಕಾಮಗಾರಿ ಮುಗಿದಿದೆ. ಇನ್ನೂ ಕೆಲ ಗ್ರಾಮಗಳಲ್ಲಿ ಅರೆಬರೆ ಕಾಮಗಾರಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಲ್ಲಿಗಳಿಗೆ ನೀರು ಪೊರೈಕೆಯಾಗುತ್ತಿಲ್ಲ.
ಕೆಲ ಗ್ರಾಮಗಳಲ್ಲಿ ಪೈಪ್‌ಲೈನ್ ಅಳವಡಿಸಿ ವರ್ಷಗಳೇ ಕಳೆದಿದ್ದರೂ ನಲ್ಲಿಗಳ ಜೋಡಣೆಯಾಗಿಲ್ಲ. ಪೈಪ್‌ಲೈನ್ ಅಳವಡಿಕೆಗಾಗಿ ಅಗೆದಿರುವ ಸಿಸಿ ರಸ್ತೆಗಳನ್ನು ಸರಿಪಡಿಸುವ ಗೋಜಿಗೂ ಹೋಗಿಲ್ಲ. ಇದರಿಂದಾಗಿ ಗ್ರಾಮಗಳಲ್ಲಿ ಅವ್ಯವಸ್ಥೆ, ಅನೈರ್ಮಲ್ಯ ಉಂಟಾಗಿದೆ.
ಗುಡಿ ಜಾವೂರ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಮಂದಗತಿಯಲ್ಲಿ ನಡೆದಿದೆ. ಇದರಿಂದಾಗಿ ಯೋಜನೆ ಪೂರ್ಣಗೊಳ್ಳಲು ಮತ್ತು ಜಾರಿಗೊಳ್ಳಲು ಮತ್ತಷ್ಟು ಸಮಯಾವಕಾಶ ತೆಗೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಜಲಧಾರೆಯ ಪೈಪ್ ಲೈನ್ ಅಳವಡಿಸುವ ವೇಳೆ ನಾಗರಾಳ-ಬಸವ ಸಾಗರ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಡಾಂಬರು ಅಗೆದು ಮರಳಿ ಮುಚ್ಚುವ ವೇಳೆ ಕಳಪೆ ಕಾಮಗಾರಿ ಮಾಡಿದ್ದಾರೆ. ಹೆದ್ದಾರಿಯಲ್ಲಿ ತಗ್ಗು ಬಿದ್ದಿದೆ. ಸಂಚಾರಕ್ಕೆ ತೊಂದರೆಯಾಗುತ್ತಿದೆ.
ನಾಗರಾಳ ಗ್ರಾಮದಲ್ಲಿ ಪೈಪ್ ಲೈನ್ ಹಾಕಲು ಅಗೆದ ಮಣ್ಣು ಮುಚ್ಚುವ ಗೋಜಿಗೆ ಹೋಗಿಲ್ಲ. ಕೆಲ ಕಡೆ ಸಿಸಿ ರಸ್ತೆ ಅಗೆದು ಮರಳಿ ಕಾಂಕ್ರಿಟ್ ಹಾಕುವ ಸಮಯದಲ್ಲಿ ಕಳಪೆ ಕಾಮಗಾರಿ ಮಾಡಿದ್ದಾರೆ.
ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಶೇ70 ರಿಂದ 75 ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಕೆಲವು ಭಾಗಗಳಲ್ಲಿ ಕಾಮಗಾರಿ ಬಾಕಿ ಉಳಿದಿದೆ. ಜೆಜೆಎಂ ಯೋಜನೆಯಡಿ ಕೆಲ ಗ್ರಾಮದಲ್ಲಿ ಅಳವಡಿಸಿದ ನಲ್ಲಿಗಳಿಗೆ ಇಂದಿನವರೆಗೂ ನೀರು ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ಗ್ರಾಮಸ್ಥರು ಜಲಧಾರೆ ಎಂಜನಿಯರ್ ಅವರಿಗೆ ವಿಚಾರಿಸಲು ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಜನ ಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಜನರು ದೂರಿದ್ದಾರೆ.
ವಿವಿಧ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ.ಯೋಜನೆಯ ಸಮರ್ಪಕ ಅನುಷ್ಠಾನ ಮತ್ತು ನ್ಯೂನತೆಗಳನ್ನು ಸರಿಪಡಿಸುವ ಕಾರ್ಯ ಜರೂರಾಗಿ ಆಗಬೇಕಿದೆ ಲಕ್ಷ್ಮಣ ಕತ್ತಿ ಗ್ರಾಮಸ್ಥ ಗುತ್ತಿಗೆದಾರ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಗ್ರಾಮದಲ್ಲಿ ಅರೆಬರೆ ಕಾಮಗಾರಿ ಮಾಡಿದ್ದರಿಂದ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ. ಗ್ರಾಮಸ್ಥರು ಪಂಚಾಯಿತಿಗೆ ಬಂದು ಕಿರಿಕಿರಿ ಮಾಡುತ್ತಿದ್ದಾರೆ. ಈ ಬಗ್ಗೆ ಇಒ ಅವರ ಗಮನಕ್ಕೆ ತಂದಿದ್ದೇನೆಪ್ರವೀಣ ಪಾಟೀಲ ನಾಗರಾಳ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.