
ಮುದಗಲ್: ತಾಲ್ಲೂಕು ಕೇಂದ್ರ ಘೋಷಣೆಗಾಗಿ 19 ಸಂಘಟನೆಗಳು ಹಾಗೂ ಪಟ್ಟಣದ ಜನ ಬೃಹತ್ ಪ್ರತಿಭಟನೆ ನಡೆಸಿ ಮುದಗಲ್ ಬಂದ್ ಮಾಡಿದರು.
ಪಟ್ಟಣದ ನಾಗರಿಕರು, ಮುದಗಲ್ ತಾಲ್ಲೂಕು ಹೋರಾಟ ಸಮಿತಿ, ಡಿಎಸ್‌ಎಸ್, ಕರವೇ, ಕಾರ್ಮಿಕ ಸಂಘಟನೆ, ವ್ಯಾಪಾರಸ್ಥರು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪೊಲೀಸ್ ಠಾಣೆ ಮುಂದೆ ಕೆಲಕಾಲ ರಸ್ತೆ ಸಂಚಾರ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಆದಾಪುರ ಮಾತನಾಡಿ, ‘ಸುತ್ತಲಿನ 60 ಗ್ರಾಮಗಳು, 18 ತಾಂಡಾಗಳಿಗೆ ಪಟ್ಟಣವೇ ಕೇಂದ್ರ ಬಿಂದು. ಎರಡು ರಾಜ್ಯ ಹೆದ್ದಾರಿ ಹೊಂದಿದೆ, ಪುರಸಭೆ, ಕಷಿ ಉತ್ಪನ್ನ ಮಾರುಕಟ್ಟೆ, ವಿದ್ಯುತ್ ಪ್ರಸಾರಣಾ ಕೇಂದ್ರ, ಪದವಿ ಕಾಲೇಜು, ಬಸ್ ನಿಲ್ದಾಣ, ಖಜಾನೆ ಕಚೇರಿ, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ಉಪ ತಹಶೀಲ್ದಾರ್ ಕಚೇರಿ, ರಾಷ್ಟ್ರೀಕತ ಬ್ಯಾಂಕ್ಗಳು ಇಲ್ಲಿವೆ. ಪಟ್ಟಣ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಹುಂಡೆಕಾರ್, ಗದ್ದಿಗೌಡರ್, ವಾಸುದೇವ ಸಮಿತಿಗಳು ಮುದಗಲ್ ತಾಲ್ಲೂಕು ಕೇಂದ್ರವಾಗಲು ಯೋಗ್ಯವಾಗಿದೆ ಎಂದು ವರದಿ ನೀಡಿವೆ. ಮುದಗಲ್ ತಾಲ್ಲೂಕು ಕೇಂದ್ರ ಘೋಷಣೆ ಮಾಡುವವರಿಗೂ ನಿರಂತರ ಧರಣಿ ಮಾಡೋಣ’ ಎಂದರು.
ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ‘ತಾಲ್ಲೂಕು ಕೇಂದ್ರದ ಹೋರಾಟಕ್ಕೆ ನನ್ನ ಬೆಂಬಲವಿದೆ. ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಬೆಂಗಳೂರಿಗೆ ನಿಯೋಗ ಹೋಗಲು ಬಸ್ ಸೌಲಭ್ಯ ಕಲ್ಪಿಸುತ್ತೇನೆ. ನಿರಂತರ ಕುಡಿಯುವ ನೀರಿಗಾಗಿ ₹50 ಕೋಟಿ ನೀಡಿ, ಬಜೆಟ್‌ನಲ್ಲಿ ಸೇರಿಸಿ ಎಂದು ಒತ್ತಡ ಹಾಕಿದ್ದೇನೆ. ಈ ವಿಷಯಗಳ ಕುರಿತು ಅಧಿವೇಶನದಲ್ಲಿ ಅನೇಕ ಬಾರಿ ಚರ್ಚಿಸಿದ್ದೇನೆ’ ಎಂದರು.
ಶಾಸಕ ಮಾನಪ್ಪ ವಜ್ಜಲ್ ಪ್ರತಿಭಟನೆ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಅಲ್ಲಿಂದ ತೆರಳಿದರು. ಶಾಸಕ ವಜ್ಜಲ್, ಲಿಂಗಸುಗೂರು ತಹಶೀಲ್ದಾರ್ ಪುರುರಾಜ ಸಿಂಗ್ ಸೋಲಂಕಿ ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿದರು.
ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು, ಅಂಗಡಿಗಳು ಮುಚ್ಚಿದ್ದವು. ಮಸ್ಕಿ ಸಿಪಿಐ ರಾಮಣ್ಣ ಜಾಲಗೇರಿ, ಲಿಂಗಸುಗೂರು ಸಿಪಿಐ ಹೊಸಕೇರಪ್ಪ, ಮುದಗಲ್ ಪಿಎಸ್ಐ ವೆಂಕಟೇಶ ಮಾಡಗೇರಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ನೀಡಿದ್ದರು.
ಡಾ.ಗುರುರಾಜ ದೇಶಪಾಂಡೆ, ಮುಖಂಡ ಗುರುಬಸಪ್ಪ ಸಜ್ಜನ್, ಶೇಖ್ ರಸೂಲ್, ಮಹಾಂತೇಶ ಪಾಟೀಲ, ತಮ್ಮಣ್ಣ ಗುತ್ತೇದಾರ್, ಶರಣಪ್ಪ ಕಟ್ಟಿಮನಿ, ಕರವೇ ಅಧ್ಯಕ್ಷ ಎಸ್.ಎ.ನಹಿಂ, ಗುಂಡಪ್ಪ ಗಂಗಾವತಿ, ಬಸವರಾಜ ಬಂಕದಮನಿ, ದೇವೇಂದ್ರ ವಕೀಲ, ಸಿದ್ದಯ್ಯ ಸಾಲಿಮಠ, ದೇವಪ್ಪ ರಾಠೋಡ, ಶಶಿಧರ ಕಂಚಿಮಠ, ರಘವೀರ ಮುದಗಲ್ ಮಾತನಾಡಿದರು.
ಉದಯ ಕುಮಾರ ಕಮ್ಮಾರ, ಕೃಷ್ಣಾ ಚಲುವಾದಿ, ಮೈಬೂಬಸಾಬ್ ಕಡ್ಡಿಪುಡಿ, ಮೌನೇಶ ಶಿವನಗುತ್ತಿ, ರಹೀಮ್ ಷಾ ಇದ್ದರು.
ಮುದಗಲ್ ಹೋಬಳಿಯ ಮುಖಂಡರು ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸಿ ಗೆದ್ದು ಶಾಸಕರು, ಸಚಿವರಾಗಿದರೂ ತಾಲ್ಲೂಕು ಕೇಂದ್ರವನ್ನಾಗಿ ಮಾಡಿಸಲು ಮನಸ್ಸು ಮಾಡಿಲ್ಲ ಎಂಬುದು ಜನರ ನೋವಿಗೆ ಕಾರಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.