ADVERTISEMENT

ಜಾಲಹಳ್ಳಿ | ಭಾವೈಕ್ಯದ ಮೊಹರಂ: ಭಾವಪೂರ್ಣ ವಿದಾಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 6:13 IST
Last Updated 7 ಜುಲೈ 2025, 6:13 IST
ಜಾಲಹಳ್ಳಿ ಪಟ್ಟಣದಲ್ಲಿ ಮೊಹರಂ ಹಬ್ಬದ ಅಂಗವಾಗಿ ಹುಸೇನ ಬಾಷಾ, ಸೈಯದ ಖಾಸಿಂ, ಇಮಾಮ್ ಖಾಸಿಂ, ಹೈದರ ಅಲಿ ನಾಲ್ಕೂ ದೇವರ ಪಂಜಾಗಳನ್ನು ಹೊತ್ತು ಮಸೀದಿಯಿಂದ ಹೊರ ನಡೆಯುತ್ತಿರುವುದು
ಜಾಲಹಳ್ಳಿ ಪಟ್ಟಣದಲ್ಲಿ ಮೊಹರಂ ಹಬ್ಬದ ಅಂಗವಾಗಿ ಹುಸೇನ ಬಾಷಾ, ಸೈಯದ ಖಾಸಿಂ, ಇಮಾಮ್ ಖಾಸಿಂ, ಹೈದರ ಅಲಿ ನಾಲ್ಕೂ ದೇವರ ಪಂಜಾಗಳನ್ನು ಹೊತ್ತು ಮಸೀದಿಯಿಂದ ಹೊರ ನಡೆಯುತ್ತಿರುವುದು   

ಜಾಲಹಳ್ಳಿ: ಪಟ್ಟಣದಲ್ಲಿ ಭಾನುವಾರ ಹಿಂದೂ, ಮುಸ್ಲಿಮರು ಸೇರಿ ಭಾವೈಕ್ಯದಿಂದ ಮೊಹರಂ ಆಚರಣೆಗೆ ಭಾವಪೂರ್ಣ ವಿದಾಯ ಹೇಳಿದರು.

ಕಳೆದ 10 ದಿನಗಳಿಂದ ನಿರಂತರವಾಗಿ ಗ್ರಾಮದಲ್ಲಿ ಸಕಲ ಸಿದ್ಧತೆ ಮಾಡಿಕೊಂಡು ಶನಿವಾರ ರಾತ್ರಿ ಮೊಹರಂ 9ನೇ ದಿನ ಕತಲ್ ರಾತ್ರಿಯಾಗಿ ಆಚರಣೆ ಮಾಡಲಾಯಿತು. ಅದೇ ರಾತ್ರಿಯೇ ಭಕ್ತರು ತಮ್ಮ ಕಾಣಿಕೆಗಳನ್ನು ದೇವರಿಗೆ ಸಮರ್ಪಿಸಿದರು.

ಗ್ರಾಮದಲ್ಲಿ ಒಂದೇ ಮಸೀದಿ ಇದ್ದು, ನಾಲ್ಕು ದೇವರಾದ ಹುಸೇನ್ ಬಾಷಾ, ಸೈಯದ್ ಖಾಸಿಂ, ಹೈದರ್ ಅಲಿ, ಇಮಾಮ್ ಖಾಸಿಂ ದೇವರನ್ನು ಕೂರಿಸಲಾಗಿತ್ತು. ಶನಿವಾರ ರಾತ್ರಿಯಲ್ಲ ಮಸೀದಿ ಮುಂದೆ ಅಲಾಯಿ ಗುಂಡಿಯಲ್ಲಿ ಟ್ರ್ಯಾಕ್ಟರ್‌ಗಳಿಂದ ಮರದ ತುಂಡುಗಳನ್ನು ತಂದು ಉರಿಸಿ ಕೆಂಡ ಮಾಡಲಾಗಿತ್ತು. ಹುಸೇನ ಬಾಷಾ ಹಾಗೂ ಸೈಯದ್ ಖಾಸಿಂ ಹೆಸರಿನ ದೇವರ ಸಾವರಿಯೇ ವಿಶೇಷವಾಗಿತ್ತು.

ADVERTISEMENT

ದೇವರನ್ನು ಮಸೀದಿಂದ ಹೊರತಂದು ಭಕ್ತರ ದರ್ಶನ ಮಾಡಿಸಿ ನಂತರ ಪೂಜಾರಿಗಳು ದೇವರ ಸಮೇತವಾಗಿ ಬೆಂಕಿಯಲ್ಲಿ ಪ್ರದಕ್ಷಿಣೆ ಮಾಡುವಂತಹ ಒಂದು ದೃಶ್ಯ ಕಣ್ಣುತುಂಬಿಸಿಕೊಳ್ಳಲು ಅನೇಕರು ದೂರದ ಬೆಂಗಳೂರು, ಪುಣೆ, ಮುಂಬೈ ಸೇರಿದಂತೆ ಅನೇಕ ಕಡೆಯಿಂದ ಭಕ್ತರು ಬಂದಿದ್ದರು.

ಭಾನುವಾರ ಮಧ್ಯಾಹ್ನ ನಾಲ್ಕೂ ದೇವರನ್ನು ಮಸೀದಿಂದ ಹೊರತಂದು ಕೆಲವು ಭಕ್ತರ ಮನೆಗಳಿಗೆ ಭೇಟಿ ನೀಡಿ ನೈವೇದ್ಯ ಸ್ವೀಕರಿಸಲಾಯಿತು. ನಂತರ ದೇಸಾಯಿ ಮನೆತನದವರ ತೋಟದಲ್ಲಿ ದಫನ್ ಕಾರ್ಯ ಮುಗಿಸಿ ಹಬ್ಬಕ್ಕೆ ಅಂತಿಮ ವಿದಾಯ ಹೇಳಿದರು.

ಮಸೀದಿಯ ಮುಂದೆ ಅಗೆದಿರುವ ಕುಣಿ ಮುಚ್ಚಿ ಹಿಡಿ ಮಣ್ಣು ನೀಡುವಂತಹ ದೃಶ್ಯ ಜನರ ಕಣ್ಣಲ್ಲಿ ನೀರು ತರಿಸಿತು. ಒಟ್ಟಾರೆ ದೇವರು ಹಿಡಿಯುವವರು ಮಾತ್ರ ಮುಸ್ಲಿಮರು. ಆದರೆ, ಒಂದು ದೇವರ ಹಿಂದೆ ಕನಿಷ್ಠ ನೂರಕ್ಕೂ ಹೆಚ್ಚು ಹಿಂದೂ ಯುವಕರು ಸೇವೆ ಮಾಡುತ್ತಾರೆ. ಸ್ಥಳೀಯವಾಗಿ ಐದು ಮನೆತನದ ಮುಖಂಡರು ಸೇರಿ ಮೊಹರಂ ಆಚರಣೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.

ಸ್ಥಳೀಯ ಪೊಲೀಸ್‌ ಇನ್‌ಸ್ಪೆಕ್ಟರ್ ವೈಶಾಲಿ ಝಳಕಿ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಿದ್ದರು.

ಜಾಲಹಳ್ಳಿ ಪಟ್ಟಣದಲ್ಲಿ ಭಾನುವಾರ ಮೊಹರಂ ಆಚರಣೆಗೆ ವಿದಾಯ ಹೇಳುವ ಸಂದರ್ಭದಲ್ಲಿ ಸೇರಿದ ಜನಸ್ತೋಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.