ADVERTISEMENT

ದೇವದುರ್ಗ: ಮುಂಡರಗಿ ಸಹಕಾರ ಸಂಘದಲ್ಲಿ ಅವ್ಯವಹಾರ

ರೈತರಿಂದ ಸಾಲ ಮರುಪಾವತಿಯ ಹಣ ಪಡೆದುಕೊಂಡು ಬ್ಯಾಂಕ್‌ಗೆ ಕಟ್ಟದ ಹಿಂದಿನ ಕಾರ್ಯದರ್ಶಿ

ಯಮುನೇಶ ಗೌಡಗೇರಾ
Published 4 ಡಿಸೆಂಬರ್ 2024, 6:37 IST
Last Updated 4 ಡಿಸೆಂಬರ್ 2024, 6:37 IST
ಮುಂಡರಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ಸಂಘ ಕಚೇರಿ
ಮುಂಡರಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ಸಂಘ ಕಚೇರಿ   

ದೇವದುರ್ಗ: ತಾಲ್ಲೂಕಿನ ಮುಂಡರಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹60 ಲಕ್ಷಕ್ಕೂ ಅಧಿಕ ಅವ್ಯವಹಾರ ನಡೆದಿರುವುದು ರೈತರಿಗೆ ನೀಡಿದ ಮರುಪಾವತಿ ತಿಳವಳಿಕೆ ನೋಟಿಸ್‌ನಿಂದ ಬಹಿರಂಗಗೊಂಡಿದೆ.

ಮುಂಡರಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಡಲಗುಡ್ಡ, ಸೂಲದಗುಡ್ಡ, ಗಣಜಲಿ, ದೇವತಗಲ್, ಬಿ.ಗಣೇಕಲ್, ಸಮುದ್ರ, ಪಂದ್ಯಾನ, ಮಲ್ಲಾಪುರ ಗ್ರಾಮದ ಸಾವಿರಾರು ಜನರು ಷೇರುದಾರರಾಗಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದಾರೆ.

ರೈತರಾದ ಸಾಬಣ್ಣ 2021ರ ಏಪ್ರಿಲ್ 20ರಂದು ₹1 ಲಕ್ಷ ಸಾಲ ಪಡೆದು ಎರಡು ವರ್ಷಗಳ ಬಳಿಕ ಮರುಪಾವತಿ ಮಾಡಿ ಬೇಬಾಕಿ ಪ್ರಮಾಣ ಪತ್ರ ಪಡೆದು ಹೊಲ ಮಾರಾಟ ಮಾಡಿದ್ದಾರೆ. ಆದರೆ ದೇವದುರ್ಗ ಆರ್‌ಡಿಸಿಸಿ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಸಾಲ ಮರುಪಾವತಿ ಆಗಿಲ್ಲ. ಅಂದಿನ ಕಾರ್ಯದರ್ಶಿ ಅವರು ರೈತರಿಂದ ಮರುಪಾವತಿಯ ಹಣ ಬ್ಯಾಂಕ್‌ಗೆ ಕಟ್ಟದೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಭಗವಂತರಾಯ ಎಂಬ ರೈತ 2018ರ ಅಕ್ಟೋಬರ್ 4ರಂದು ₹25 ಸಾವಿರ ಸಾಲ ಪಡೆದು 2020ರಲ್ಲಿ ಮರುಪಾವತಿ ಮಾಡಿದ್ದಾರೆ. ರೈತ ಮಾರ್ಥಂಡಪ್ಪ 2022ರ ಮಾರ್ಚ್ 24ರಂದು ₹1 ಲಕ್ಷ ಸಾಲ ಪಡೆದಿದ್ದಾರೆ. ಆದರೆ ಇಂದಿನ ಕಾರ್ಯದರ್ಶಿ ₹2 ಲಕ್ಷ ಬಾಕಿ ಇದೆ ಎಂದು ತಿಳವಳಿಕೆ ಪತ್ರದ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ನಂತರ ರೈತ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಸಾಲ ಬಾಕಿ ಇರುವುದಾಗಿ ತಿಳಿಸಿದ್ದಾರೆ.

ಹೀಗೇ ರೈತ ಮಹಿಳೆ ಹನುಮಂತಿ ₹50 ಸಾವಿರ, ಗಂಗಮ್ಮ ₹2 ಲಕ್ಷ ಪಡೆದು ಕಿರುವಳಿ ಮಾಡಿಸಿಕೊಂಡು ಸಾಲ ಮರು ಪಾವತಿ ಬೇಬಾಕಿ ಪ್ರಮಾಣ ಪತ್ರ ಪಡೆದಿದ್ದಾರೆ. ಆದರೆ ಇವರ ಹೆಸರಿನಲ್ಲಿ ದೇವದುರ್ಗ ಶಾಖೆಯಲ್ಲಿ ಸಾಲ ಬಾಕಿ ಉಳಿದಿದೆ.

2022ರಲ್ಲಿನ ಸಾಮಾಜಿಕ ಲೆಕ್ಕಪರಿಶೋಧನೆಯಲ್ಲಿ ₹17 ಲಕ್ಷ ಸಾಲ ಇರುವುದು ದಾಖಲೆಗಳಿಂದ ತಿಳಿದುಬಂದಿದೆ. ಆದರೆ ಆ ವರ್ಷ ದೇವದುರ್ಗ ಆರ್‌ಡಿಸಿಸಿ ಬ್ಯಾಂಕ್ ವತಿಯಿಂದ ₹60.69 ಲಕ್ಷ ಸಾಲ ಪಡೆದಿದ್ದಾರೆ ಎಂದು ಪ್ರಸ್ತುತ ಮುಂಡರಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವರಾಜ ಕರ್ನಾಳ ನೀಡಿದ ದಾಖಲೆಗಳಿಂದ ಬಹಿರಂಗಗೊಂಡಿದೆ.

2017ರಿಂದ ಜೂನ್ 9, 2022ವರೆಗೆ ಕಾರ್ಯದರ್ಶಿಯಾಗಿದ್ದ ಮಲ್ಲಯ್ಯ ಅವರು ಆನಾರೋಗ್ಯದ ನೆಪ ಹೇಳಿ ರಾಜೀನಾಮೆ ನೀಡಿದ್ದಾರೆ. ಅವರ ಅವಧಿಯಲ್ಲಿ ಇಷ್ಟೊಂದು ಭ್ರಷ್ಟಾಚಾರವಾಗಿರುವುದು ದಾಖಲೆಗಳಿಂದ ಬಹಿರಂಗಗೊಂಡಿದೆ.

ಪ್ರಸ್ತುತ ಅಧ್ಯಕ್ಷ ಶಿವರಾಜ ಕರ್ನಾಳ 2022ರವರೆಗೆ ಸಾಲ ಪಡೆದ ರೈತರ ದಾಖಲಾತಿಗಳನ್ನು ಒದಗಿಸುವಂತೆ ಹಿಂದಿನ ಕಾರ್ಯದರ್ಶಿಗಳಾದ ಅಯ್ಯಾಳಪ್ಪ ಮತ್ತು ಮಲ್ಲಯ್ಯ ಅವರಿಗೆ 3 ಬಾರಿ ಪತ್ರ ಬರೆದಿದ್ದಾರೆ. ಮಾಜಿ ಕಾರ್ಯದರ್ಶಿ ಮಲ್ಲಯ್ಯ ಅವರು ಪತ್ರಕ್ಕೆ ಯಾವುದೇ ಉತ್ತರ ನೀಡಿಲ್ಲ. ಅವರ ನಂತರದ ಕಾರ್ಯದರ್ಶಿಯಾಗಿದ್ದ ಅಯ್ಯಾಳಪ್ಪ ಅವರು ಮಲ್ಲಯ್ಯ ಅವರು ಯಾವುದೇ ದಾಖಲಾತಿ ಒದಗಿಸಿರುವುದಿಲ್ಲ ಎಂದು ನೀಡಿದ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ರೈತರಿಂದ ಸಾಲ ಮರುಪಾವತಿಗೆ ₹60 ಲಕ್ಷಕ್ಕೂ ಅಧಿಕ ಹಣ ಪಡೆದ ಮಾಜಿ ಕಾರ್ಯದರ್ಶಿ ಮಲ್ಲಯ್ಯ ಆರ್‌ಡಿಸಿಸಿ ಬ್ಯಾಂಕ್‌ನ ಖಾತೆಗೆ ಕಟ್ಟದೆ ಸ್ವಂತಕ್ಕೆ ಬಳಸಿಕೊಂಡು ರೈತರಿಗೆ ವಂಚಿಸಿದ್ದಾರೆ. ಸಾಲ ಪಡೆದ ರೈತರಿಂದ ಕಾರ್ಯದರ್ಶಿ ತಿರುವಳಿ ಮಾಡಿಸಿ ಬೇಬಾಕಿ ಪತ್ರ ನೀಡಿದ್ದಾರೆ. ಮುಂಡರಗಿ ಸಹಕಾರ ಬ್ಯಾಂಕ್‌ ವ್ಯಾಪ್ತಿಯ ಬಹುತೇಕ ರೈತರ ಸಾಲ ಬಾಕಿ ಉಳಿದಿದೆ ಎಂದು ಆರ್‌ಡಿಸಿಸಿ ಬ್ಯಾಂಕ್ ದೇವದುರ್ಗ ಶಾಖೆ ವ್ಯವಸ್ಥಾಪಕ ವೆಂಕಟೇಶ ‘ಪ್ರಜಾವಾಣಿ’ಗೆ ತಿಳಿಸಿದರು.

ರೈತರಿಗೆ ವಂಚಿಸಿದ ಕಾರ್ಯದರ್ಶಿ ಮಲ್ಲಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇದರ ಹಿಂದೆ ಬಹುದೊಡ್ಡ ವಂಚನೆಯ ಜಾಲವಿದ್ದು ಸಮಗ್ರ ತನಿಖೆಯಾಗಬೇಕು.
–ಮರೀಲಿಂಗಪ್ಪ ಕೊಳ್ಳೂರು, ವಕೀಲ
ರೈತರಿಂದ ಪಡೆದ ಸಾಲಕ್ಕೆ ಮರುಪಾವತಿ ಮಾಡಿದ ಬೇಬಾಕಿ ಪ್ರಮಾಣ ಪತ್ರ ನೀಡಿದ್ದಾರೆ. ಹಣ ಬ್ಯಾಂಕ್ ಖಾತೆಗೆ ಪಾವತಿಸುವ ಬದಲಿಗೆ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ತನಿಖೆ ನಡೆಸಬೇಕು.
–ಶೇಖ್ ಹುಸೇನಿ, ಸಹಾಯಕ ನಿಬಂಧಕ ಸಹಕಾರ ಸಂಘಗಳ ಕಾರ್ಯಾಲಯ ರಾಯಚೂರು
ಸಂಘದ ವ್ಯಾಪ್ತಿಯ 9 ಗ್ರಾಮಗಳಲ್ಲಿ ರೈತರು ವಂಚನೆಗೆ ಒಳಗಾಗಿದ್ದಾರೆ. ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ.
–ಶಿವರಾಜ ಕಾರ್ನಾಳ, ಮುಂಡರಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.