ADVERTISEMENT

ನೌಕರರ ಸರ್ವಾಧಿಕಾರ ಧೋರಣೆ ಸಲ್ಲ

ಲಿಂಗಸುಗೂರು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 3:50 IST
Last Updated 18 ಆಗಸ್ಟ್ 2021, 3:50 IST
ಲಿಂಗಸುಗೂರಲ್ಲಿ ಮಂಗಳವಾರ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಯಮನೂರ ಭೋವಿ ಮಾತನಾಡಿದರು
ಲಿಂಗಸುಗೂರಲ್ಲಿ ಮಂಗಳವಾರ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಯಮನೂರ ಭೋವಿ ಮಾತನಾಡಿದರು   

ಲಿಂಗಸುಗೂರು: ‘ಮುಖ್ಯಾಧಿಕಾರಿ, ನೌಕರರ ಸರ್ವಾಧಿಕಾರತ್ವ ಧೋರಣೆ ಕೊನೆಯಾಗಿಸಿ, ಜನರಿಗೆ ಉತ್ತಮ ಸೇವೆ ನೀಡಲು ಮುಂದಾಗದಿದ್ದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ‘ ಎಂದು ಸದಸ್ಯರು ಎಚ್ಚರಿಕೆ ನೀಡಿದರು.

ಮಂಗಳವಾರ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ ಸದಸ್ಯ ಬಾಬುರೆಡ್ಡಿ ಮುನ್ನೂರು ಮಾತನಾಡಿ, ‘ಪ್ರತಿನಿಧಿಗಳ ಅವಶ್ಯಕತೆ ನೌಕರರಿಗೆ ಇದೆಯೊ? ಇಲ್ಲವೊ? ತಿಳಿಸಬೇಕು. ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಆರಂಭ, ಪೌರ ಕಾರ್ಮಿಕ ಚುನಾವಣೆ, ವಿವಿಧ ಕಾಮಗಾರಿಗಳ ಆರಂಭದ ಮಾಹಿತಿ ನೀಡಿಲ್ಲ’ ಎಂದರು.

‘ಶುದ್ಧ ಕುಡಿವ ನೀರು ಪೂರೈಕೆ ತಾರತಮ್ಯ, ಚರಂಡಿಗಳ ಸ್ವಚ್ಛತೆ, ಕಸ ವಿಲೆವಾರಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಸದಸ್ಯರು ಕೇಳುವ ಮಾಹಿತಿ ನೀಡಲು ಆಗದ ಸಿಬ್ಬಂದಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ವಿಶ್ವಾಸ ಕಳೆದು ಕೊಂಡಿದ್ದಾರೆ’ ಎಂದು ಉಪಾಧ್ಯಕ್ಷ ಎಂ.ಡಿ ರಫಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಬಡಾವಣೆಗಳ ಅಭಿವೃದ್ಧಿ, ಸಾರ್ವಜನಿಕ ಉದ್ದೇಶ ಮತ್ತು ಉದ್ಯಾನಕ್ಕೆ ಮೀಸಲಿಟ್ಟ ನಿವೇಶನಗಳ ಮಾರಾಟ, ಅಕ್ರಮ ನಳಗಳ ಜೋಡಣೆ, ಕಸವಿಲೆವಾರಿ ವಾಹನಗಳ ದುಸ್ಥಿತಿ. ನೂತನ ವಾಹನಗಳ ಖರೀದಿಗೆ ಮುಂದಾಗದಿರುವುದು ಆಡಳಿತ ವೈಫಲ್ಯತೆ ಸಾಕ್ಷಿ’ ಎಂದು ಸದಸ್ಯ ದೊಡ್ಡನಗೌಡ ಹೊಸಮನಿ, ಯಮನಪ್ಪ ದೇಗುಲಮಡಿ, ಬಾಬುರೆಡ್ಡಿ, ಅಬ್ದುಲ್‍ ರೌಫ್‍ ದೂರಿದರು.

ಗಂಭೀರ ಚರ್ಚೆಗಳ ಮಧ್ಯೆ ಆಗೊಮ್ಮೆ, ಈಗೊಮ್ಮೆ ಏರು ಧ್ವನಿಯಲ್ಲಿ ಅಧ್ಯಕ್ಷೆ ಗದ್ದೆಮ್ಮ ಭೋವಿ ಉತ್ತರಿಸುತ್ತಿದ್ದುದು ಸದಸ್ಯರನ್ನು ನಗೆ ಗಡಲಲ್ಲಿ ತೇಲಾಡುವಂತೆ ಮಾಡಿತು. ನನ್ನ ವಾರ್ಡ್‌ ಸಮಸ್ಯೆಯೆ ಬಗೆಹರಿಯುತ್ತಿಲ್ಲ. ಪುರಸಭೆ ಎಲ್ಲಾ ವಾರ್ಡ್‌ ಸ್ಥಿತಿ ದೇವರೆ ಕಾಪಾಡಬೇಕು’ ಎಂದು ಅಧ್ಯಕ್ಷರೆ ಅಸಹಾಯಕತೆ ತೋಡಿಕೊಂಡರು.

ಮುಖ್ಯಾಧಿಕಾರಿ ನರಸಪ್ಪ ತಹಶೀಲ್ದಾರ್‌ ಮಧ್ಯಪ್ರವೇಶಿಸಿ, ‘ಹೊಸದಾಗಿ ಬಂದಿರುವೆ. ಈ ಹಿಂದಿನ ದಿನಗಳಲ್ಲಿ ಏನು ನಡೆದಿವೆಯೊ ಮಾಹಿತಿ ಇಲ್ಲ. ಈ ಮೊದಲು ಯಾರ ತಪ್ಪಿನಿಂದಾ ದರು ಅವಘಡಗಳು ನಡೆದಿದ್ದರೆ ಆ ಘಟನೆಗಳಿಗೆ ಕ್ಷಮೆಯಾಚಿಸುವೆ’ ಎಂದು ಗೊಂದಲಕ್ಕೆ ತೆರೆ ಎಳೆದರು.

ಅಧ್ಯಕ್ಷೆ ಗದ್ದೆಮ್ಮ ಯಮನೂರ ಭೋವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಡಿ.ರಫಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಕುಲಕರ್ಣಿ, ಮುಖ್ಯಾಧಿಕಾರಿ ನರಸಪ್ಪ ತಹಶೀಲ್ದಾರ್ ಸೇರಿದಂತೆ ಪುರಸಭೆಯ ಎಲ್ಲಾ ಸದಸ್ಯರು ಇದ್ದರು.

ಮುಖ್ಯಾಧಿಕಾರಿ ಸಭೆಗೆ ತಮ್ಮನ್ನು ಪರಿಚಯಿಸಿಕೊಂಡು ಸದಸ್ಯರಿಗೆ ಪುಸ್ತಕ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.