ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ ಮುಗಿಯುತ್ತಲೇ ಮಸ್ಕಿಯಲ್ಲಿ ಉಪಚುನಾವಣೆ ಕನವರಿಕೆ

ಮಸ್ಕಿ ವಿಧಾನಸಭೆ ಕ್ಷೇತ್ರ: ಪೈಪೋಟಿಗೆ ಕಾಂಗ್ರೆಸ್‌, ಬಿಜೆಪಿ ಈಗಿನಿಂದಲೇ ತಯಾರಿ

ನಾಗರಾಜ ಚಿನಗುಂಡಿ
Published 5 ಜನವರಿ 2021, 13:21 IST
Last Updated 5 ಜನವರಿ 2021, 13:21 IST
ಬಿಜೆಪಿ ಮಸ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪುತ್ರಪ್ಪ ಅರಳಿಹಳ್ಳಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌, ಕಾಂಗ್ರೆಸ್‌ ಮಸ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ವೈ.ಪಾಟೀಲ
ಬಿಜೆಪಿ ಮಸ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪುತ್ರಪ್ಪ ಅರಳಿಹಳ್ಳಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌, ಕಾಂಗ್ರೆಸ್‌ ಮಸ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ವೈ.ಪಾಟೀಲ   

ರಾಯಚೂರು: ಗ್ರಾಮ ಪಂಚಾಯಿತಿಗಳ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ, ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯನ್ನು ಚುನಾವಣಾ ಆಯೋಗವು ಶೀಘ್ರದಲ್ಲೇ ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆಗಳು ಗರಿಗೆದರಿವೆ.

ರಾಜ್ಯ ಬಿಜೆಪಿ ಸರ್ಕಾರದಿಂದ ಸಚಿವ ಸಂಪುಟ ವಿಸ್ತರಣೆ ಮಾಡುವುದು ಖಚಿತ ಎನ್ನುವ ಹೇಳಿಕೆ ಹೊರಬಂದ ಬಳಿಕ ಮಸ್ಕಿ ಉಪಚುನಾವಣೆಯು ಹೆಚ್ಚು ಆಸಕ್ತಿ ಕೆರಳಿಸಿದಂತಾಗಿದೆ. ಚುನಾವಣೆ ಎದುರಿಸಿ ಸಚಿವ ಸ್ಥಾನ ಪಡೆಯುವ ಆಕಾಂಕ್ಷೆಯೊಂದಿಗೆ ಪ್ರತಾಪಗೌಡ ಪಾಟೀಲ ಅವರು ಕಾದಿರುವುದು ಕೂಡಾ ಕುತೂಹಲ ಹೆಚ್ಚಲು ಕಾರಣ. ಕಾಂಗ್ರೆಸ್‌ ತೊರೆದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರಲ್ಲಿ ಒಬ್ಬರಾದ ಪ್ರತಾಪಗೌಡ ಕೂಡಾ ಮುಂಚೂಣಿಯಲ್ಲಿದ್ದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸದಸ್ಯರನ್ನು ಸೆಳೆದುಕೊಳ್ಳಲು ರಾಜಕೀಯ ಪಕ್ಷಗಳು ಮೊದಲ ಆದ್ಯತೆಯಾಗಿ ಪರಿಗಣಿಸಿವೆ. ಗ್ರಾಮ ಪಂಚಾಯಿತಿಯಲ್ಲೂ ಪಕ್ಷದಿಂದ ಗುರುತಿಸಿ ಆಡಳಿತ ಚುಕ್ಕಾಣಿ ಹಿಡಿಯುವುದಕ್ಕೆ ರಾಜಕೀಯ ಪಕ್ಷಗಳ ಮುಖಂಡರು ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಬಣಗಳನ್ನು ಕಟ್ಟಿಕೊಂಡು ಬಹುಮತ ಸಾಬೀತುಪಡಿಸುವ ಪೂರ್ವತಯಾರಿಗೆ ರಾಜಕೀಯ ಮುಖಂಡರು ಬೆಂಬಲವಾಗಿ ನಿಂತಿದ್ದಾರೆ.

ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಪೂರ್ವದಲ್ಲಿಯೇ ಮಸ್ಕಿಯಲ್ಲಿ ರಾಜಕೀಯ ಪಕ್ಷಗಳಿಂದ ಉಪಚುನಾವಣೆ ಕಸರತ್ತು ಜೋರಾಗಿತ್ತು. ಚುನಾವಣೆ ಸಂದರ್ಭದಲ್ಲಿ ತೆರೆಮರೆಗೆ ಹೋಗಿತ್ತು. ಇದೀಗ ಕಸರತ್ತುಗಳನ್ನು ಮತ್ತೆ ಆರಂಭಿಸುವುದಕ್ಕೆ ಎರಡೂ ಪಕ್ಷಗಳ ಕಾರ್ಯಕರ್ತರ ಪಡೆ ಸಜ್ಜಾಗಿವೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೆಂಬಲಿಗರ ಮಧ್ಯೆಯೇ ಸ್ಪರ್ಧೆ ಏರ್ಪಟ್ಟಿದ್ದರಿಂದ ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರು ಇದುವರೆಗೂ ತಟಸ್ಥವಾಗಿ ಉಳಿದಿದ್ದರು. ಈಗ ಎಲ್ಲರನ್ನು ಒಗ್ಗೂಡಿಸಿ ಉಪಚುನಾವಣೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿರುವ ಬಸನಗೌಡ ತುರ್ವಿಹಾಳ ಅವರು ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಮೌನವಾಗಿ ಉಳಿದಿದ್ದರು. ಇದೀಗ ಉಪಚುನಾವಣೆ ಘೋಷಣೆ ಆಗಬಹುದು ಎನ್ನುವ ನಿರೀಕ್ಷೆ ಹೆಚ್ಚಾಗಿದ್ದರಿಂದ ಮತ್ತೆ ಬಲ ಹೆಚ್ಚಿಸಿಕೊಳ್ಳುವ ಕಾರ್ಯಕ್ಕೆ ಧುಮಕಲಿದ್ದಾರೆ.

ಮಸ್ಕಿ, ಸಿಂಧನೂರು ಹಾಗೂ ಲಿಂಗಸುಗೂರು ಮೂರು ತಾಲ್ಲೂಕುಗಳಲ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರವು ವಿಸ್ತರಿಸಿಕೊಂಡಿದೆ. ಆಯಾ ತಾಲ್ಲೂಕುಗಳಲ್ಲಿರುವ ರಾಜಕೀಯ ಮುಖಂಡರು ಉಪಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ರಾಜ್ಯ ಸರ್ಕಾರವು ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ದಿನಾಂಕ ನಿಗದಿಪಡಿಸಿಲ್ಲ. ಅದಕ್ಕೂ ಮೊದಲೇ ಉಪಚುನಾವಣೆ ಘೋಷಣೆ ಆಗಬಹುದು ಎನ್ನುವ ಚರ್ಚೆ ಜಿಲ್ಲೆಯಲ್ಲಿ ನಡೆದಿದೆ.

***

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷಕ್ಕೆ ಒಳ್ಳೆಯ ಗೆಲುವು ಸಿಕ್ಕಿದೆ. ಭೂತಮಟ್ಟದಲ್ಲಿ ಹಾಗೂ ಶಕ್ತಿಕೇಂದ್ರಗಳಲ್ಲಿ ಸಮಿತಿಗಳನ್ನು ಮಾಡುವ ಕೆಲಸ ಆರಂಭಿಸಿದ್ದು, ಉಪಚುನಾವಣೆಗೆ ಸಿದ್ಧತೆ ನಡೆಯುತ್ತಿದೆ

- ಶಿವಪುತ್ರಪ್ಪ ಅರಳಿಹಳ್ಳಿ, ಮಸ್ಕಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ

***

ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಪಕ್ಷದ ಬೆಂಬಲಿಗರನ್ನು ಸನ್ಮಾನಿಸುವ ಜೊತೆಗೆ ಉಪಚುನಾವಣೆ ತಯಾರಿ ಆರಂಭಿಸಲಾಗಿದೆ. ಶೀಘ್ರದಲ್ಲೇ ಉಪಚುನಾವಣೆ ಘೋಷಣೆ ಆಗಬಹುದು ಎನ್ನುವ ನಿರೀಕ್ಷೆ ಇದೆ

- ಮಲ್ಲಿಕಾರ್ಜುನ ಪಾಟೀಲ, ಮಸ್ಕಿ ತಾಲ್ಲೂಕು ಕಾಂಗ್ರೆಸ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.