ADVERTISEMENT

ಮಸ್ಕಿ | ಬಡಾವಣೆ ನಿರ್ಮಾಣ ನೆಪದಲ್ಲಿ ಬೆಟ್ಟ ಅಗೆತ; ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:55 IST
Last Updated 1 ಡಿಸೆಂಬರ್ 2025, 5:55 IST
ಮಸ್ಕಿಯ ನಿಷೇಧಿತ ಪ್ರದೇಶದ ಪಕ್ಕದಲ್ಲಿನ ಬೆಟ್ಟವನ್ನು ಬಡಾವಣೆ ನಿರ್ಮಾಣಕ್ಕೆ ಅಗೆಯುತ್ತಿರುವುದು
ಮಸ್ಕಿಯ ನಿಷೇಧಿತ ಪ್ರದೇಶದ ಪಕ್ಕದಲ್ಲಿನ ಬೆಟ್ಟವನ್ನು ಬಡಾವಣೆ ನಿರ್ಮಾಣಕ್ಕೆ ಅಗೆಯುತ್ತಿರುವುದು   

ಮಸ್ಕಿ: ಪಟ್ಟಣದ ಹೃದಯ ಭಾಗದಲ್ಲಿರುವ ಪ್ರಾಚ್ಯವಸ್ತು ಇಲಾಖೆಯ ನಿಷೇಧಿತ ಜಾಗಕ್ಕೆ ಹೊಂದಿಕೊಂಡಿರುವ ಬೆಟ್ಟವನ್ನು ಖಾಸಗಿ ವ್ಯಕ್ತಿಯೊಬ್ಬರು ಯಂತ್ರಗಳ ಮೂಲಕ ಅಗೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ವೆ ನಂ. 402/1, 402/2 ಜಮೀನು ಖಾಸಗಿ ವ್ಯಕ್ತಿಗಳಿಗೆ ಸೇರಿದ್ದರೂ ಇಲ್ಲಿ ಗುಂಡಿ ಅಗೆಯಬೇಕಾದರೆ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ಪರವಾನಗಿ ಪಡೆಯಬೇಕು ಎಂಬ ನಿಯಮವಿದೆ.

ಜಮೀನು ಮಾಲೀಕರು ಜಮೀನು ಸ್ವಚ್ಛಗೊಳಿಸುವ ನೆಪದಲ್ಲಿ ಜೆಸಿಬಿ ಯಂತ್ರಗಳ ಮೂಲಕ ಜಮೀನಿನ ಪಕ್ಕದಲ್ಲಿ ಮಲ್ಲಿಕಾರ್ಜುನ ದೇವರ ಬೆಟ್ಟ ಅಗೆಯುವ ಕಾರ್ಯ ರಾಜಾರೋಷವಾಗಿ ನಡೆಸಿದ್ದು, ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಈ ಕಡೆ ಗಮನ ಕೊಡದೆ ಭೂಮಿ ಅಗೆಯಲು ಸಹಕರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ADVERTISEMENT

ಖಾಸಗಿ ವ್ಯಕ್ತಿಗಳು ಬಡಾವಣೆ ನಿರ್ಮಿಸಲು ಈ ಜಮೀನನ್ನು ಎನ್‌.ಎ ಮಾಡಿಸಿದ್ದಾರೆ. ಆದರೆ, ಪ್ರಾಚ್ಯವಸ್ತು ಇಲಾಖೆ ಅಧೀನಕ್ಕೆ ಒಳಪಟ್ಟ ಈ ಸರ್ವೇ ನಂಬರ್‌ಗೆ ಇಲಾಖೆ ಅಧಿಕಾರಿಗಳು ಅನುಮತಿ (ಎನ್‌ಒಸಿ) ನೀಡಿದ್ದು, ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಹೋರಾಟಗಾರ ಜಮದಗ್ನಿ ಗೋನಾಳ ತಿಳಿಸಿದ್ದಾರೆ.

ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಗೆ ಒಳಪಟ್ಟ ಈ ಜಾಗದಲ್ಲಿ ಬಡಾವಣೆ ನಿರ್ಮಿಸಲು ಜಮೀನಿನ ಮಾಲೀಕರು ಮುಂದಾಗಿದ್ದಾರೆ. ಇಲಾಖೆ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಎನ್ಒಸಿ ನೀಡಿದ್ದಾರೆ ಎಂದು ಪುರಸಭೆ ಮಾಜಿ ಸದಸ್ಯ ಎಂ.ಅಮರೇಶ ಆರೋಪಿಸಿದ್ದಾರೆ.

ಜಮೀನಿನ ಮಾಲೀಕರು ಎನ್‌.ಎ ಮಾಡಿಸಿದ್ದು ಜಾಗ ಸ್ವಚ್ಛ ಮಾಡಿ ಬಡಾವಣೆ ನಿರ್ಮಿಸಲು ಪರವಾನಗಿ ಪಡೆದಿದ್ದಾರೆ. ಬೆಟ್ಟ ಅಗೆಯುತ್ತಿರುವ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ಕೆಲಸ ಬಂದ್ ಮಾಡಿಸಲಾಗಿದೆ
ಮಂಜುನಾಥ ಬೋಗಾವತಿ, ತಹಶೀಲ್ದಾರ್ ಮಸ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.