ADVERTISEMENT

ಮಸ್ಕಿ: ರಾಷ್ಟ್ರಮಟ್ಟದ ಓಟದ ಸ್ಪರ್ಧೆ ಹೆಸರಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 4:54 IST
Last Updated 25 ಸೆಪ್ಟೆಂಬರ್ 2025, 4:54 IST
ಡಾ.ಅಬ್ದುಲ್ ಕಲಾಂ ಫೌಂಡೇಷನ್‌ ಹೆಸರಲ್ಲಿ ಮುದ್ರಿತವಾದ ಭಿತ್ತಿಪತ್ರ
ಡಾ.ಅಬ್ದುಲ್ ಕಲಾಂ ಫೌಂಡೇಷನ್‌ ಹೆಸರಲ್ಲಿ ಮುದ್ರಿತವಾದ ಭಿತ್ತಿಪತ್ರ   

ಮಸ್ಕಿ (ರಾಯಚೂರು ಜಿಲ್ಲೆ): ಡಾ.ಅಬ್ದುಲ್ ಕಲಾಂ ಫೌಂಡೇಷನ್‌ ಹೆಸರಿನಲ್ಲಿ ಪಟ್ಟಣದಲ್ಲಿ ರಾಷ್ಟ್ರಮಟದ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸುಳ್ಳು ಪ್ರಚಾರ ನಡೆಸಿ ಕ್ರೀಡಾಪಟುಗಳನ್ನು ವಂಚಿಸಲಾಗಿದೆ. 

ಸೆ.25ರಂದು ಮಸ್ಕಿ ಪಟ್ಟಣದಲ್ಲಿ ರಾಷ್ಟ್ರಮಟ್ಟದ ಓಟದ ಸರ್ಧೆ ಏರ್ಪಡಿಸಲಾಗಿದೆ. ಆಸಕ್ತ ಕ್ರೀಡಾಪಟುಗಳು ಪ್ರವೇಶ ಶುಲ್ಕ ₹5,000 ಅನ್ನು ಮೊಬೈಲ್‌ 9359435107 ಸಂಖ್ಯೆಗೆ ಫೋನ್ ಪೇ ಮಾಡಬೇಕು ಎಂದು ತಿಳಿಸಿದ್ದಾರೆ.

ಡಾ.ಅಬ್ದುಲ್ ಕಲಾಂ ಫೌಂಡೇಷನ್‌ ಹೆಸರಿನ ಭಿತ್ತಿಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ರಾಜ್ಯದ ಓಟಗಾರ್ತಿಯೊಬ್ಬರು, ಎರಡು ದಿನಗಳ ಹಿಂದೆ ಭಿತ್ತಿಪತ್ರದಲ್ಲಿ ಹಾಕಿದ ಮೊಬೈಲ್‌ 9620515140/ 8383691009ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಫೋನ್ ಪೇ ಮಾಡಿ ಸೆ.24ರಂದು ರಾಯಚೂರಿನ ರಂಗಮಂದಿರದಲ್ಲಿ ಭೇಟಿಯಾಗಿ ಎಂದು ಸೂಚಿಸಿದ್ದಾರೆ.

ADVERTISEMENT

ಅದರಂತೆ ಸೆ.24ರಂದು ಬೆಂಗಳೂರಿನಿಂದ ರಾಯಚೂರಿಗೆ ಬಂದ ಓಟಗಾರ್ತಿ, ಫೋನ್ ಪೇ ಮಾಡದೆ ನೆರವಾಗಿ ರಂಗಮಂದಿರಕ್ಕೆ ಬಂದು ವಿಚಾರಿಸಿದಾಗ ಯಾವುದೇ ಓಟದ ಸ್ಪರ್ಧೆ ಆಯೋಜಿಸಿಲ್ಲ ಎಂಬುದು ಗೊತ್ತಾಗಿದೆ. ಭಿತ್ತಿಪತ್ರದಲ್ಲಿ ಕೊಟ್ಟ ಮೂರು ಮೊಬೈಲ್ ನಂಬರ್‌ಗಳು ಸ್ವಿಚ್‌ ಆಫ್ ಆಗಿವೆ.

ಮಸ್ಕಿಯಲ್ಲಿ ಡಾ.ಅಬ್ದಲ್ ಕಲಾಂ ಫೌಂಡೇಷನ್‌ ಹೆಸರಿನಲ್ಲಿ ಯಾವುದೇ ಸಂಸ್ಥೆ ಇಲ್ಲ. ಆದರೂ ಈ ಫೌಂಡೇಷನ್‌ನ ಹೆಸರಿನಲ್ಲಿ ಭಿತ್ತಿಪತ್ರ ಹಾಕಿ ಭಾರತಿ ಸಿಮೆಂಟ್‌ನ ವಿಶಾಲರೆಡ್ಡಿ ಅವರ ಹೆಸರು ಹಾಗೂ ಮೊಬೈಲ್ ನಂಬರ್ ಹಾಕಿ ಸಂಪರ್ಕಿಸುವಂತೆ ಹೇಳಲಾಗಿದೆ.

‘ಮಸ್ಕಿ ಪಟ್ಟಣದಲ್ಲಿ ಡಾ.ಅಬ್ದುಲ್ ಕಲಾಂ ಫೌಂಡೇಷನ್‌ ಸಂಸ್ಥೆಯಿಂದ ರಾಷ್ಟ್ರಮಟ್ಟದ ಓಟದ ಸ್ಪರ್ಧೆ ನಡೆಸುವ ಬಗ್ಗೆ ಪೊಲೀಸ್ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ’ ಎಂದು ಪಿಎಸ್‌ಐ ಕೆ.ರಂಗಯ್ಯ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.