ಸಿಂಧನೂರು: ತಾಲ್ಲೂಕಿನ ತುರ್ವಿಹಾಳ ಹಾಗೂ ಗುಂಜಳ್ಳಿ ಹೋಬಳಿಯ 19 ಗ್ರಾಮಗಳನ್ನು ಮಸ್ಕಿ ತಾಲ್ಲೂಕಿಗೆ ಸೇರ್ಪಡೆ ಮಾಡಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿರುವುದು ಸರಿಯಲ್ಲ. ಈ ಪ್ರಯತ್ನ ಮುಂದುವರಿಸಿದರೆ ಆ ಭಾಗದ ಜನ ರೊಚ್ಚಿಗೇಳುವುದು ನಿಶ್ಚಿತ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಈ ಕುರಿತು ಜಿಲ್ಲಾಧಿಕಾರಿ ತಹಶೀಲ್ದಾರ್‌ರಿಂದ ವರದಿ ತರಿಸಿಕೊಂಡಿದ್ದಾರೆಂಬ ಮಾಹಿತಿ ಇದೆ. ಈ ವಿವಾದ ಕುರಿತು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ಭಿನ್ನ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಒಂದೇ ಪಕ್ಷದ ಶಾಸಕರಾಗಿದ್ದು, ಇಬ್ಬರ ನಡುವೆ ಶೀತಲಸಮರ ನಡೆದಿದೆಂಬುದು ಸ್ಪಷ್ಟವಾಗುತ್ತದೆ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ. ತಮ್ಮ ಅಧಿಕಾರದ ದುರಾಸೆಗೆ ಸಾರ್ವಜನಿಕರ ಹಿತಾಸಕ್ತಿ ಬಲಿ ಕೊಡುವುದು ಸೂಕ್ತವಲ್ಲ ಎಂದು ದೂರಿದರು.
ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಈ ಹಳ್ಳಿಗಳು ಸೇರ್ಪಡೆಗೊಂಡರೆ ತಾಲ್ಲೂಕು ಕೇಂದ್ರಕ್ಕೆ ಹೋಗಲು ಸುಮಾರು 40 ರಿಂದ 50 ಕಿ.ಮೀ ಕ್ರಮಿಸಬೇಕಾಗುತ್ತದೆ. ಸಿಂಧನೂರು ಕೇವಲ 20 ಕಿ.ಮೀ ಇದ್ದು, ವ್ಯಾಪಾರ ವಹಿವಾಟು, ಕಚೇರಿ, ಆಸ್ಪತ್ರೆ, ಶಾಲಾ-ಕಾಲೇಜುಗಳಿಗೆ ಸೇರಿದಂತೆ ಎಲ್ಲ ಕಾರ್ಯಚಟುವಟಿಕೆಗೆ ಅನುಕೂಲವಾಗುತ್ತದೆ’ ಎಂದರು.
ಮಳೆಯಿಂದಾಗಿ ಅತಿವೃಷ್ಠಿ ಉಂಟಾಗಿ ಸೂರ್ಯಪಾನ, ಹತ್ತಿ ಮತ್ತಿತರ ಬೆಳೆಗಳು ನಾಶವಾಗಿವೆ. ಇದುವರೆಗೂ ಸರ್ಕಾರದಿಂದ ಸರ್ವೆ ಹಾಗೂ ಪರಿಹಾರದ ಕಾರ್ಯಗಳು ಪ್ರಾರಂಭಗೊಂಡಿಲ್ಲ. ಶಾಸಕರು ಜನರಿಗೆ ಒಳ್ಳೆದಾಗುವ ಕೆಲಸಗಳನ್ನು ಮಾಡಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.