ADVERTISEMENT

ಮಸ್ಕಿ ಉಪಚುನಾವಣೆ: ಪ್ರತಿ ಮನೆಗೂ ಮೂರು ಬಾರಿ ಭೇಟಿ –ಎನ್‌.ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 13:32 IST
Last Updated 1 ಏಪ್ರಿಲ್ 2021, 13:32 IST
ಎನ್‌.ರವಿಕುಮಾರ್‌
ಎನ್‌.ರವಿಕುಮಾರ್‌   

ಮಸ್ಕಿ: ‘ಮಸ್ಕಿ ವಿಧಾನಸಭೆ ಕ್ಷೇತ್ರವ್ಯಾಪ್ತಿಯಲ್ಲಿ 50 ಸಾವಿರ ಕುಟುಂಬಗಳಿದ್ದು, ಏಪ್ರಿಲ್‌ 17 ರೊಳಗೆ ಪ್ರತಿ ಮನೆಗೂ ಮೂರು ಬಾರಿ ಭೇಟಿ ನೀಡಿ ಮತಯಾಚನೆ ಮಾಡುವುದಕ್ಕೆ ಬಿಜೆಪಿ ಕಾರ್ಯಕರ್ತರನ್ನು ಸಿದ್ಧಗೊಳಿಸಲಾಗಿದೆ’ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿ ಬೂತ್‌ನಲ್ಲೂ ಬಿಜೆಪಿಗೆ ಹೆಚ್ಚು ಮತ ಸೆಳೆಯಲು ಯೋಜಿಸಲಾಗಿದೆ. ಏಪ್ರಿಲ್‌ 6 ರಂದು ಬಿಜೆಪಿ ಸಂಸ್ಥಾಪನಾ ದಿನವಿದೆ. ಪ್ರತಿ ಬೂತ್‌ಮಟ್ಟದ ಅಧ್ಯಕ್ಷರ ಮನೆಗಳಿಗೆ ಬೆಳಿಗ್ಗೆ 10 ಗಂಟೆಗೆ ಕಾರ್ಯಕರ್ತರು ತೆರಳುವರು. ಅವರ ಮನೆಗೆ ನಾಮಫಲಕ ಅಳವಡಿಸಿ, ಮನೆಮೇಲೆ ಪಕ್ಷದ ಧ್ವಜ ಹಾರಿಸಲು ಯೋಜಿಸಲಾಗಿದೆ’ ಎಂದರು.

ಚುನಾವಣೆ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಿಜಯೇಂದ್ರ, ಉಪಮುಖ್ಯಮಂತ್ರಿ ಗೋವಿಂದ್ರ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್‌ ಕಟೀಲ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಶಾಸಕರು ಭಾಗವಹಿಸುವರು. ಈ ಬಾರಿಯೂ ನಿಶ್ಚಿತವಾಗಿಯೂ ಪ್ರತಾಪಗೌಡ ಗೆಲುವು ಸಾಧಿಸುವರು ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಸ್ಯೆ ಚರ್ಚೆ: ‘ಸಚಿವ ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಧ್ಯೆ ಅನುದಾನ ಹಂಚಿಕೆ ಕುರಿತು ಭಿನ್ನಾಭಿಪ್ರಾಯ ಬಂದಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಇಬ್ಬರೂ ಒಂದೇಡೆ ಸರಿ ಪರಸ್ಪರ ಚರ್ಚಿಸಿ ಸಮಸ್ಯೆ ಪರಹರಿಸಿಕೊಳ್ಳುವರು’ ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.