ರಾಯಚೂರು: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ವಿಶೇಷ ದತ್ತು ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಲ್ಪಟ್ಟ ಮಗುವಿಗೆ ನಾಮಕರಣ ಕಾರ್ಯಕ್ರಮ ನಗರದ ಸರ್ಕಾರಿ ಪರಿವೀಕ್ಷಣಾಲಯ ಸಂಸ್ಥೆಯಲ್ಲಿ ಸಂಭ್ರಮದಿಂದ ನಡೆಯಿತು.
ಪರಿವೀಕ್ಷಣಾಲಯದ ಸಭಾಂಗಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ನಾಮಕರಣದ ತೊಟ್ಟಿಲನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಮಕ್ಕಳು ಹಾಗೂ ಮಹಿಳಾ ಸಿಬ್ಬಂದಿ ಹೊಸ ಬಟ್ಟೆಗಳನ್ನು ಧರಿಸಿ ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಸಂಪ್ರದಾಯದ ಪ್ರಕಾರ ವಿಧಿ–ವಿಧಾನಗಳನ್ನು ನೆರವೇರಿಸಿ ಸೋಬಾನ ಪದಗಳನ್ನು ಹಾಡಿ ಮಗುವಿಗೆ ಶುಭ ಹಾರೈಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅಮರೇಶ ಹರವಿ ಅವರು ಮಗುವಿಗೆ ನಾಮಕರಣ ಮಾಡಿದರು.
ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಹೆಗಡೆ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಈರಮ್ಮ, ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಭಾರತಿ ನಾಯಕ, ಬಾಲಕರ ಬಾಲ ಮಂದಿರದ ಅಧೀಕ್ಷಕ ನಾಗರಾಜ, ಸರ್ಕಾರಿ ಪರಿವೀಕ್ಷಣಾಲಯದ ಅಧೀಕ್ಷಕ ಶೇಖ್ ಮೆಹಬೂಬ್, ಪರಿವೀಕ್ಷಣಾಧಿಕಾರಿ ವಿನಯಕುಮಾರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಬರುವ ವಿವಿಧ ಮಕ್ಕಳ ಪಾಲನಾ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.