ADVERTISEMENT

ರಾಯಚೂರು: ಸೌಕರ್ಯಕ್ಕೆ ಕಾದಿರುವ ಪ್ರವಾಸಿ ತಾಣಗಳು

ಇಲಾಖೆಯಲ್ಲಿ ಕಾಯಂ ಅಧಿಕಾರಿ ಇಲ್ಲ, ಅಭಿವೃದ್ಧಿಯೂ ಇಲ್ಲ

ನಾಗರಾಜ ಚಿನಗುಂಡಿ
Published 21 ಫೆಬ್ರುವರಿ 2022, 20:15 IST
Last Updated 21 ಫೆಬ್ರುವರಿ 2022, 20:15 IST
–ಸತೀಶ್‌ ಕೆ.ಎಚ್‌., ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು (ಪ್ರಭಾರ)
–ಸತೀಶ್‌ ಕೆ.ಎಚ್‌., ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು (ಪ್ರಭಾರ)   

ರಾಯಚೂರು: ಜಿಲ್ಲೆಯ ಪ್ರವಾಸಿ ತಾಣಗಳು ಮೂಲ ಸೌಕರ್ಯ ವಂಚಿತವಾಗಿ ಉಳಿದಿವೆ. ರಾಜ್ಯ ಸರ್ಕಾರವು ಈ ಬಾರಿ ಬಜೆಟ್‌ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಅನುದಾನ ಒದಗಿಸಬಹುದು ಎನ್ನುವ ನಿರೀಕ್ಷೆ ಇದೆ.

ಸಿ.ಟಿ.ರವಿ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ಜಿಲ್ಲೆಗೆ ಭೇಟಿನೀಡಿ ಪ್ರವಾಸಿ ತಾಣಗಳನ್ನು ಪರಿಶೀಲಿಸಿದ್ದರು. ಮಲಿಯಾಬಾದ್‌ ಕೋಟೆ, ರಾಯಚೂರಿನ ಕೋಟೆ, ಮುದಗಲ್‌ ಕೋಟೆ, ಜಲದುರ್ಗ ಕೋಟೆ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಿ, ಪ್ರವಾಸಿಗರನ್ನು ಸೆಳೆಯುವುದಕ್ಕೆ ಅವಕಾಶವಿದೆ ಎಂಬುದಾಗಿ ಹೇಳಿದ್ದರು. ಈ ಸಂಬಂಧ ಯೋಜನೆಯೊಂದನ್ನು ರೂಪಿಸುತ್ತಿರುವುದಾಗಿ ಭರವಸೆ ನೀಡಿದ್ದರು.

ರಾಜ್ಯ ಸರ್ಕಾರವು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿದರೆ, ಜಿಲ್ಲೆಯಲ್ಲಿ ಅಳಿದುಹೋಗುತ್ತಿರುವ ಪ್ರವಾಸಿ ತಾಣಗಳಿಗೆ ಜೀವ ತುಂಬಬಹುದು. ಬಹುತೇಕ ಕೋಟೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸಂರಕ್ಷಣೆಯಿಲ್ಲದೆ ಉರುಳುತ್ತಿವೆ. ಸ್ಥಳೀಯ ಸಂಸ್ಥೆಗಳು, ಪ್ರಾಚ್ಯವಸ್ತು ಇಲಾಖೆ, ಕಂದಾಯ ಇಲಾಖೆಯವರು ಐತಿಹಾಸಿಕ ಸ್ಥಳಗಳಲ್ಲಿ ಅತಿಕ್ರಮಣ ತಡೆಯುವುದಕ್ಕೆ ಸಾಧ್ಯವಾಗಿಲ್ಲ.

ADVERTISEMENT

ಸದ್ಯಕ್ಕೆ ದೇವಸುಗೂರ ಸುಗೂರೇಶ್ವರ ದರ್ಶನ, ಅಂಬಾಮಠ ದರ್ಶನ ಹಾಗೂ ನವರಂಗ ದರವಾಜ್‌ ನೋಡುವುದಕ್ಕೆ ಮಾತ್ರ ಪ್ರವಾಸೋದ್ಯಮ ಸಿಮೀತವಾಗಿದೆ. ಜಲದುರ್ಗ, ಮುದಗಲ್‌, ಮಸ್ಕಿ, ಮಾನ್ವಿಯ ದಾಸರ ಕಟ್ಟೆಗಳು, ದೇವದುರ್ಗ, ಲಿಂಗಸುಗೂರಿನಲ್ಲಿರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಬೇಕು. ಅಲ್ಲಿ ಪ್ರವಾಸಿಗರು ತಂಗುವ ವ್ಯವಸ್ಥೆ ಆಗಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಹಾರದ ದೊರಕಿಸುವ ವ್ಯವಸ್ಥೆ ಹಾಗೂ ಸುಗಮವಾಗಿ ತಲುಪಲು ಸಾಧ್ಯವಾಗಿಸುವುದು, ಮಾಹಿತಿ ಫಲಕಗಳನ್ನು ಅಳವಡಿಸುವುದು, ಅಂತರ್ಜಾಲ ತಾಣಗಳ ಮೂಲಕ ಪ್ರಚಾರ ಪಡಿಸುವುದು ಅಗತ್ಯವಿದೆ ಎನ್ನುವುದು ಪ್ರಜ್ಞಾವಂತ ಜನರು ಹೇಳುತ್ತಿದ್ದಾರೆ.

ಕೃಷ್ಣಾನದಿಯ ಸುಂದರ ನಡುಗಡ್ಡೆಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಮಾಡಬೇಕು. ಪ್ರವಾಸೋದ್ಯಮ ಇಲಾಖೆಯಲ್ಲಿ ಕಾಯಂ ಅಧಿಕಾರಿ, ಸಿಬ್ಬಂದಿಯನ್ನು ನೇಮಕಗೊಳಿಸಿ ಪ್ರವಾಸೋದ್ಯಮ ಇಲಾಖೆಯನ್ನು ಸದೃಢಗೊಳಿಸಿದರೆ, ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಅಲ್ಲದೆ, ಪ್ರವಾಸಿ ತಾಣಗಳ ಸುತ್ತಲೂ ಆರ್ಥಿಕತೆ ಬೆಳೆಯುವುದಕ್ಕೆ ಅನುಕೂಲವಾಗುತ್ತದೆ ಎನ್ನುವುದು ಬರೀ ಯೋಜನೆಯಲ್ಲೇ ಉಳಿದುಕೊಂಡಿದೆ.

ಅಧ್ಯಯನ ಆಸಕ್ತಿ ಇದ್ದವರು ಹಾಗೂ ಸ್ವಂತ ವಾಹನ ಸೌಲಭ್ಯ ಇದ್ದವರು ಮಾತ್ರ ಈಗ ಪ್ರವಾಸಿ ತಾಣಕ್ಕೆ ಹೋಗುವುದಕ್ಕೆ ಸಾಧ್ಯವಾಗುತ್ತಿದೆ. ಜಿಲ್ಲೆಯ ಇತಿಹಾಸವು ಪಠ್ಯದಲ್ಲಿ ಓದಿ ಹೆಮ್ಮೆ ಪಡುವುದಕ್ಕೆ ಸಾಧ್ಯವಾಗುತ್ತಿದೆ ವಿನಾ ವಾಸ್ತವದಲ್ಲಿ ಕುರುಹುಗಳನ್ನು ನೋಡಿದರೆ ನಿರಾಸೆ ಮೂಡಿಸುವಂತಿದೆ. ಬೇರೆ ಜಿಲ್ಲೆಗಳಿಂದ ಪ್ರವಾಸ ಉದ್ದೇಶಕ್ಕಾಗಿ ಬಂದವರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಸಂಚಾರ ವ್ಯವಸ್ಥೆ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ ಮರಳುತ್ತಿದ್ದಾರೆ. ಅಂತರ್ಜಾಲ ತಾಣಗಳಲ್ಲಿ ಜಿಲ್ಲೆಯ ಇತಿಹಾಸ ಓದಿಕೊಂಡವರು ಆಸಕ್ತಿಯಿಂದ ಭೇಟಿಗೆ ಬರುತ್ತಾರೆ, ಹಾಗೇ ವ್ಯವಸ್ಥೆಯನ್ನು ಶಪಿಸಿ ಮರಳುತ್ತಿದ್ದಾರೆ. ಪ್ರವಾಸಿಗರಿಗೆ ಅನುಕೂಲ ಮಾಡುವ ಕಾರ್ಯ ಇದುವರೆಗೂ ನಡೆದಿಲ್ಲ.

ರಾಜ್ಯ ಸರ್ಕಾರವು ಈ ಬಾರಿಯಾದರೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ಒದಗಿಸಬಹುದು ಎನ್ನುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.