ADVERTISEMENT

ರಾಯಚೂರು| ಸಿಎಎ ವಿರುದ್ಧ ಸಂಘಟಿತ ಹೋರಾಟ: ಸೆಂಥಿಲ್‌

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 13:00 IST
Last Updated 23 ಜನವರಿ 2020, 13:00 IST
ಶಶಿಕಾಂತ್‌ ಸೆಂಥಿಲ್‌
ಶಶಿಕಾಂತ್‌ ಸೆಂಥಿಲ್‌   

ರಾಯಚೂರು: ದೇಶದಲ್ಲಿ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಿಂದಾಗಿ ಅಲ್ಪಸಂಖ್ಯಾತರಿಗೆ ಮಾತ್ರ ತೊಂದರೆ ಆಗುವುದಿಲ್ಲ. ದೇಶದ 130 ಕೋಟಿ ಜನರಿಗೂ ಸಮಸ್ಯೆಯಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಿದೆ ಎಂದು ಐಎಎಸ್‌ ಮಾಜಿ ಅಧಿಕಾರಿ ಶಶಿಕಾಂತ್‌ ಸೆಂಥಿಲ್‌ ಹೇಳಿದರು.

ನಗರದ ಸಿಯಾತಲಾಬ್‌ ರಾಯಲ್‌ ಪ್ಯಾಲೇಸ್‌ನಲ್ಲಿ ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆಯಿಂದ ಗುರುವಾರ ಏರ್ಪಡಿಸಿದ್ದ ಪೌರತ್ವ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿಎಎ, ಎನ್‌ಸಿಆರ್‌ ಹಾಗೂ ಎನ್‌ಪಿಆರ್‌ ಕಾಯ್ದೆಗಳು ದೇಶಕ್ಕೆ ಮಾರಕವಾಗಿವೆ. ರಾಜಕಾರಣಿಗಳು ಮತಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರವು ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ADVERTISEMENT

‘ಇದರಿಂದ ಬೇಸತ್ತು ಐಎಎಸ್‌ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಪ್ರಪಂಚದಲ್ಲಿ ಬಹುದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶದಲ್ಲಿ ಸಂವಿಧಾನ ವಿರೋಧಿ ನಿರ್ಧಾರಗಳು ಹೊರಬರುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರಿಗೆ ಭ್ರಮನಿರಸನ ಆಗುವಂತಾಗಿದೆ ಎಂದು ತಿಳಿಸಿದರು.

ಇದರ ವಿರುದ್ಧ ಪ್ರಬಲವಾದ ಹೋರಾಟ ಮಾಡುವ ಅಗತ್ಯವಿದೆ. ಯುವಕರು ಧ್ವನಿ ಎತ್ತಿದಾಗ ಮಾತ್ರ ಇಂಥದ್ದನ್ನು ತಡೆಯುವುದಕ್ಕೆ ಸಾಧ್ಯವಾಗುತ್ತದೆ. ವಿಚಾರವಾದಿಗಳು ಸೇರಿದಂತೆ ಎಲ್ಲರೂ ಒಟ್ಟಾಗಿ ಸಂವಿಧಾನ ಉಳಿವಿಗಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.

ಮುಖಂಡರಾದ ಆರ್‌.ಮಾನಸಯ್ಯ, ರಾಘವೇಂದ್ರ ಕುಷ್ಟಗಿ, ರಜಾಕ್‌ ಉಸ್ತಾದ್‌, ಜೆ.ಬಿ.ರಾಜು, ಎಕ್ಬಾಲ್‌ ಅಹ್ಮದ್‌, ಶಿವಕುಮಾರ್‌ ಮ್ಯಾಗಳಮನಿ, ಚಂದ್ರಗಿರೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.