
ರಾಯಚೂರು: ನಗರದಲ್ಲಿ ಯವಕರು ತಂಡ ಕಟ್ಟಿಕೊಂಡು ಹೋಟೆಲ್ ಹಾಗೂ ಖಾಸಗಿ ಸಭಾಂಗಣದಲ್ಲಿ ನೃತ್ಯ, ಸಂಗೀತ ಆಯೋಜಿಸುವ ಮೂಲಕ ಹೊಸ ವರ್ಷವನ್ನು ಬರ ಮಾಡಿಕೊಂಡರು.
ಅಪಾರ್ಟ್‌ಮೆಂಟ್‌ಗಳಲ್ಲಿ ಕುಟುಂಬಗಳು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದವು. ಅಪಾರ್ಟ್‌ಮೆಂಟ್ ಆವರಣದಲ್ಲಿ ಸಹ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಕುಟುಂಬದ ಸದಸ್ಯರು ಮಕ್ಕಳೊಂದಿಗೆ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಯುವಕರು ನಗರದ ಹೊರ ವಲಯಗಳಲ್ಲಿ ‘ಕ್ಯಾಂಪ್ ಫೈರ್’ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಪಾನಗೋಷ್ಠಿಯಲ್ಲಿ ಪಾಲ್ಗೊಂಡು ಸಂಭ್ರಮ ಆಚರಣೆ ಮಾಡಿದರು. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಕೇಕ್ ಕತ್ತರಿಸಿ ತಂಪು ಪಾನೀಯ ಸೇವಿಸಿ ಚಲನಚಿತ್ರಗಳ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಮಾಂಸಾಹಾರಿ ಹೋಟೆಲ್ ಹಾಗೂ ರೆಸ್ಟೋರಂಟ್‌ಗಳಲ್ಲಿ ಚಿಕನ್ ಹಾಗೂ ಮಟನ್ ಬಿರಿಯಾನಿಗೆ ಬೇಡಿಕೆ ಇದ್ದ ಕಾರಣ ಗ್ರಾಹಕರಿಗೆ ಸಕಾಲದಲ್ಲಿ ಪೂರೈಕೆ ಮಾಡುವುದು ಸವಾಲಾಗಿ ಪರಿಣಮಿಸಿತು. ಅನೇಕ ಜನ ಕುಟುಂಬದೊಂದಿಗೆ ಬಿರಿಯಾನಿ ಸವಿಯಲು ಹೋಟೆಲ್‌ಗಳಿಂದ ಕೊಂಡೊಯ್ದರು.
ಕೆಲ ಮನೆಗಳಲ್ಕೇ ಬಾಡೂಟ ಸಿದ್ಧಪಡಿಸಿದ ಕಾರಣ ನಗರದ ರೊಟ್ಟಿ ಕೇಂದ್ರಗಳಲ್ಲಿ ಜಪಾತಿ, ಜೋಳದ ರೊಟ್ಟಿ ಹಾಗೂ ಸಜ್ಜೆ ರೊಟ್ಟಿ ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದರು. ರೊಟ್ಟಿ ಕೇಂದ್ರಗಳಲ್ಲಿ ವರ್ಷಾಂತ್ಯಕ್ಕೆ ಚೆನ್ನಾಗಿ ವ್ಯಾಪರ ವಹಿವಾಟು ನಡೆಯಿತು.
ಕೇಕ್‌ಗೆ ಭಾರಿ ಬೇಡಿಕೆ ಬಂದಿತ್ತು. ರಾತ್ರಿ 9 ಗಂಟೆ ವೇಳೆಗೆ ನಗರದ ಎಲ್ಲ ಹೋಟೆ್ಲ್‌ಗಳಲ್ಲಿನ ಕೇಕ್ ಮಾರಾಟವಾಗಿದ್ದವು. ತಡವಾಗಿ ಬೇಕರಿಗಳಿಗೆ ಬಂದಿದ್ದ ಯುವಕ, ಯುವತಿಯರು ನಿರಾಶೆಯಿಂದ ಮನೆಗಳಯತ್ತ ಹೆಜ್ಜೆ ಹಾಕಿದರು.
2026ರ ಹೊಸ ವರ್ಷಾಚರಣೆಯ ಕಾರಣ ಚರ್ಚ್‌ಗಳು, ಉದ್ಯಾನಗಳು, ಕೇಂದ್ರ ಬಸ್-ನಿಲ್ದಾಣ, ರೈಲು ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿತ್ತು.
ಭದ್ರತೆ ಕಟ್ಟುನಿಟ್ಟು
‘ಜಿಲ್ಲೆಯಾದ್ಯಂತ ಕಟ್ಟು ನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಲ್ವರು ಡಿವೈಎಸ್‌ಪಿ 15 ಸಿಪಿಐ 23 ಪಿಎಸ್‌ಐ 84 ಎಎಸ್‌ಐ 510 ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್ ಡಿಎಆರ್‌ನ 9 ತುಕಡಿ ಕೆ.ಎಸ್.ಆರ್.ಪಿ- 2 ತುಕಡಿ ಎ.ಎಸ್.ಸಿ 1 ತಂಡವನ್ನು ನಿಯೋಜನೆ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದರು. ‘ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಶಾಂತಿಯುತವಾಗಿ ವರ್ಷಾಚಣೆ ಮಾಡಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.