ADVERTISEMENT

ಮುದಗಲ್: ನಾಲ್ಕು ದಶಕದ ಹಿಂದೆ ನಿರ್ಮಿಸಿದ್ದ ಪೊಲೀಸ್ ಮನೆಗಳು ಶಿಥಿಲ

ಶರಣ ಪ್ಪ ಆನೆಹೊಸೂರು
Published 4 ಜನವರಿ 2023, 4:39 IST
Last Updated 4 ಜನವರಿ 2023, 4:39 IST
ಮುದಗಲ್ ಪೊಲೀಸ್ ವಸತಿಗೃಹಗಳ ಮೇಲ್ಛಾವಣಿ ಉದುರಿರುವುದು
ಮುದಗಲ್ ಪೊಲೀಸ್ ವಸತಿಗೃಹಗಳ ಮೇಲ್ಛಾವಣಿ ಉದುರಿರುವುದು   

ಮುದಗಲ್: ಸಮಾಜದ ಸುರಕ್ಷತೆ ಹಾಗೂ ನೆಮ್ಮದಿ ಕಾಪಾಡಲು ಶ್ರಮಿಸುತ್ತಿರುವ ಇಲ್ಲಿನ ಪೊಲೀಸರಿಗೆ ವಸತಿ ಗೃಹ ಸೇರಿದಂತೆ ಮೂಲ ಸೌಕರ್ಯ ಮರೀಚಿಕೆಯಾಗಿದೆ.

ಮನೆಗೆ ಮರಳಿದ ಮೇಲೂ ನೆಮ್ಮದಿಯಿಂದ ನಿದ್ರೆ ಮಾಡುವಂಥ ವಾತಾವರಣ ಬಹುಪಾಲು ಪೊಲೀಸರಿಗೆ ಇಲ್ಲ. ಮುದಗಲ್‌ನಲ್ಲಿ ಸರ್ಕಾರ ಪೊಲೀಸರಿಗಾಗಿ ನಾಲ್ಕು ದಶಕದ ಹಿಂದೆ ನಿರ್ಮಿಸಿದ್ದ ವಸತಿ ಗೃಹ ಶಿಥಿಲಗೊಂಡಿವೆ. ಆರಕ್ಷಕರ ಕುಟುಂಬಗಳು ಆತಂಕದಲ್ಲೇ ಜೀವನ ಸಾಗಿಸುತ್ತಿವೆ. ಈ ಕಟ್ಟಡಗಳು ಇಲಿ, ಹೆಗ್ಗಣಗಳ ತಾಣವಾಗಿದ್ದು, ವಿಷಜಂತುಗಳ ಕಾಟವೂ ಇವರನ್ನು ಹೈರಾಣಾಗಿಸಿದೆ. ಇಲ್ಲಿ ವಾಸಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಕೆಲವು ವಸತಿಗೃಹಗಳು ಪಾಳುಬಿದ್ದಿವೆ.

ಮುದಗಲ್ ಪೊಲೀಸ್ ಠಾಣೆ 1962ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಆಗ ಪೊಲೀಸ್‌ ಸಿಬ್ಬಂದಿ ಕುಟುಂಬಸ್ಥರ ವಾಸಕ್ಕೆ ಅನುಕೂಲವಾಗಲೆಂದು 20 ವಸತಿಗೃಹ ನಿರ್ಮಾಣ ಮಾಡಲಾಗಿದೆ. ಠಾಣೆಯಲ್ಲಿ ಸದ್ಯ 36 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

ಕಟ್ಟಡದ ಮೇಲ್ಛಾವಣೆಯ ಸಿಮೆಂಟ್ ಉದುರಿ ಬೀಳುತ್ತಿದೆ. ಮಳೆಗಾಲದಲ್ಲಿ ಮನೆಗಳು ಸೋರುತ್ತಿವೆ. ಹೀಗೆ ವಿವಿಧ ಕಾರಣಗಳಿಂದಾಗಿ ಕೆಲ ಪೊಲೀಸರು ಆ ಮನೆಗಳನ್ನು ತೊರೆದು, ಪಟ್ಟಣದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ಇಬ್ಬರು ಪಿಎಸ್ಐ, ಮೂವರು ಎಎಸ್ಐ, ಇಬ್ಬರು ಹೆಡ್ ಕಾನ್‌ಸ್ಟೆಬಲ್, ಹತ್ತು ಕಾನ್‌ಸ್ಟೆಬಲ್ ಕುಟುಂಬಕ್ಕೆ ವಸತಿ ಗೃಹಗಳು ಇಲ್ಲ. 15 ವರ್ಷಗಳ ಹಿಂದೆ ನಿರ್ಮಿಸಿದ ಆರು ವಸತಿ ಗೃಹಗಳ ಹೊಸ ಕಟ್ಟಡಕ್ಕೆ ಹಾಕಿದ ಸ್ನಾನಗೃಹ ಪೈಪ್‌ ಲೈನ್ ಹಾಗೂ ನೀರಿನ ಪೈಪ್‌ಲೈನ್ ಹಾಳಾದರೂ ದುರಸ್ತಿ ಮಾಡಿಸಿಲ್ಲ. ಕೆಲವು ಪೊಲೀಸರು ತಾವು ವಾಸಿಸುವ ವಸತಿಗೃಹಗಳನ್ನು ಸಣ್ಣ-ಪುಟ್ಟ ದುರಸ್ತಿ ಮಾಡಿಸಿಕೊಂಡಿದ್ದಾರೆ. ಆದರೆ, ಮೂರು ದಿನಕ್ಕೆ ಒಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿರುವುದರಿಂದ ನೀರಿನ ಬವಣೆ ತಪ್ಪಿಲ್ಲ.

ಸುಸಜ್ಜಿತವಾದ ವಸತಿ ಗೃಹಗಳನ್ನು ನಿರ್ಮಿಸುತ್ತೇವೆ ಎಂದು ಶಿಥಿಲಗೊಂಡ ವಸತಿ ಗೃಹಗಳನ್ನು ನೆಲಸಮಗೊಳಿಸಿದ್ದಾರೆ. ಆದರೆ, ಇಲ್ಲಿಯವರಿಗೂ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಪಿಎಸ್ಐ ಸೇರಿ ಆರು ಜನ ಸಿಬ್ಬಂದಿ ಲಿಂಗಸುಗೂರುದಿಂದ ಬಂದು ಹೋಗುತ್ತಿದ್ದಾರೆ. ಇದರಿಂದ ತೊಂದರೆಯಾಗುತ್ತಿದೆ ಎಂದು ಪೊಲೀಸ್‌ ಸಿಬ್ಬಂದಿ ತಿಳಿಸಿದ್ದಾರೆ.

ವಸತಿ ಗೃಹಗಳ ಹಿಂಭಾಗದಲ್ಲಿ ಚರಂಡಿ ನಿರ್ಮಿಸಿಲ್ಲ. ಹಾಗಾಗಿ ಮಲೀನ ನೀರು ನಿಂತು ದುರ್ನಾತ ಬರುತ್ತಿದೆ. ತ್ಯಾಜ್ಯದಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಹೊಸ ವಸತಿ ಗೃಹಗಳನ್ನು ಅದಷ್ಟು ಬೇಗ ನಿರ್ಮಿಸಬೇಕು ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.