
ರಾಯಚೂರು: ‘ಕರುನಾಡಿನಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಅಸ್ಮಿತೆ ಬೆಳೆಸಿಕೊಳ್ಳಬೇಕು. ಈ ದಿಸೆಯಲ್ಲಿ ಕನ್ನಡ ಕಾರ್ಯಕ್ರಮಗಳ ಮೂಲಕ ಅಭಿಮಾನ ಮೆರೆಯುತ್ತಿರುವ ಬಶೀರ್ ಅಹ್ಮದ್ ಹೊಸಮನಿ ಕುಟುಂಬದ ಸೇವೆ ಶ್ಲಾಘನೀಯವಾಗಿದೆ’ ಎಂದು ಸಾಹಿತಿ ರಾಮಣ್ಣ ಹವಳೆ ಹೇಳಿದರು.
ಇಲ್ಲಿಯ ಕನ್ನಡ ಭವನದಲ್ಲಿ ಹೊಸಮನಿ ಪ್ರಕಾಶನ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ನೃಪತುಂಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜನ ಜಾಗೃತಿ ಸಂಸ್ಥೆಗಳು, ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಮಾಡಬೇಕಾದ ಕಾರ್ಯಕ್ರಮಗಳನ್ನು ಹೊಸಮನಿ ಪ್ರಕಾಶನವು ಹೆಚ್ಚು ಆಸಕ್ತಿ ಹಾಗೂ ಅಭಿಮಾನದಿಂದ ಮಾಡುತ್ತಿದೆ‘ ಎಂದು ಬಣ್ಣಿಸಿದರು.
‘ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಕನ್ನಡ ಭಾಷೆ ಜನ್ಮತಾಳಿದೆ. ಗ್ರೀಕ್ ಶಾಸನಗಳಲ್ಲೂ ಕನ್ನಡ ಭಾಷೆ ಕಾಣಬಹುದಾಗಿದೆ. ಹಲ್ಮಿಡಿ ಶಾಸನವು ಕದಂಬ ಲಿಪಿಯಲ್ಲಿನ ಅತ್ಯಂತ ಹಳೆಯ ಕನ್ನಡ ಭಾಷೆಯ ಶಾಸನವಾಗಿದೆ . ಶಾಸನವು ಕ್ರಿ.ಶ 450 ರಿಂದ ಕ್ರಿ.ಶ 500 ರ ಅವಧಿಯಲ್ಲಿ ರಚನೆಯಾಗಿದೆ. ಇದೇ ಅವಧಿಯಲ್ಲಿ ಕನ್ನಡ ಅಕ್ಷರೂಪ ಪಡೆದಿರುವುದು ಸಂಶೋಧನೆಯಿಂದ ತಿಳಿದು ಬರುತ್ತದೆ‘ ಎಂದರು.
‘ಬಶೀರ್ ಅಹ್ಮದ್ ಹೊಸಮನಿ ಅವರ ಮಾತೃಭಾಷೆ ಉರ್ದು ಹಾಗೂ ಹಿಂದಿ ಆಗಿದ್ದರೂ ಅಪ್ಪಟ ಕನ್ನಡಿಗರಾಗಿ ಕುವೆಂಪು ಅವರ ಮಾತಿನಂತೆ ಕನ್ನಡಕ್ಕೆ ಕೈ ಎತ್ತು ಕಲ್ಪವೃಕ್ಷವಾಗುತ್ತದೆ ಎನ್ನುವ ನುಡಿಯಂತೆ ಅವರ ಕುಟುಂಬದ ಸರ್ವ ಸದಸ್ಯರು ಮನೆಯಲ್ಲೂ ಕನ್ನಡ ಭಾಷೆ ಬಳಸಿ ಕನ್ನಡಕ್ಕೆ ಒತ್ತುಕೊಟ್ಟಿದ್ದಾರೆ‘ ಎಂದರು.
‘ಹೊಸ ತಮ್ಮ ನಿವಾಸಕ್ಕೂ ಕನ್ನಡ ಡಿಂಡಿಮ ಎಂದು ಹೆಸರಿಡುವುದರ ಮೂಲಕ 17 ವರ್ಷಗಳಿಂದ ಕನ್ನಡ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಹೇಳಿದರು.
ಅಖಿಲ ಕರ್ನಾಟಕ ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಎಲ್.ಗೋಪಿ ಮಾತನಾಡಿ, ‘ಹೊಸಮನಿ ಪ್ರಕಾಶನದ ಅಧ್ಯಕ್ಷ ಬಶೀರ್ ಅಹ್ಮದ್ ಹೊಸಮನಿ ಅವರು ಸರ್ಕಾರದ ವಿರುದ್ಧ ಹೋರಾಟ ನಡೆಸಿ ನಗರದ ಮೆಕ್ಕಾ ದರ್ವಾಜಾ ಕೋಟೆ ಮೇಲೆ ಕನ್ನಡ ಬಾವುಟ ಹಾರುವಂತೆ ಮಾಡಿದ್ದಾರೆ‘ ಎಂದು ತಿಳಿಸಿದರು.
ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್‌ನ ತರಬೇತುದಾರರಾದ ಷಂಷಾದಬೇಗಂ ಮಾತನಾಡಿ, ‘ನಾವೆಲ್ಲರೂ ಕೈ ಜೋಡಿಸಿದಾಗ ಮಾತ್ರ ಕನ್ನಡ ತೇರು ಎಳೆಯಲು ಸಾಧ್ಯವಿದೆ‘ ಎಂದು ಹೇಳಿದರು.
ಪ್ರಕಾಶನ ಅಧ್ಯಕ್ಷ ಬಶೀರಅಹ್ಮದ್ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕರ್ನಾಟಕ ರಾಜ್ಯ ರೈತ ಸಂಘ ಗೌರವಧ್ಯಕ್ಷ ಚಾಮರಾಸ ಮಾಲಿಪಾಟೀಲ, ಬಾಬು ಭಂಡಾರಿಗಲ್, ಅಯ್ಯಪ್ಪಯ್ಯ ಹುಡಾ, ರಾಮಲಿಂಗಪ್ಪ ಕುಸ್ನಿ, ಸಯ್ಯದ್‌ಗೌಸ್ ಮೋದಿನ್ ಪೀರಜಾದೆ, ಬೀರಪ್ಪ ಶಂಭೋಜಿ, ಈರಣ್ಣ ಕೋಸಗಿ, ವೀರೇಂದ್ರಕುಮಾರ ಕುರ್ಡಿ ಅವರಿಗೆ ನೃಪತುಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿಫಾ ಹೊಸಮನಿ ಸ್ವಾಗತಿಸಿದರು. ಖುಷಿ ಬ ಹೊಸಮನಿ ಪ್ರಾಸ್ತವಿಕವಾಗಿ ಮಾತನಾಡಿದರು,, ಆರ್. ಶಿವಮ್ಮ ನಿರೂಪಿಸಿದರು. ಹೊಸ ಮನಿ ಪ್ರಕಾಶನದ ಉಪಾಧ್ಯಕ್ಷೆ ಪರ್ವೀನ್‌ಬೇಗಂ ಹೊಸಮನಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.