ADVERTISEMENT

ರಾಜಕೀಯ ಕಾರಣಕ್ಕಾಗಿ ತೇಜೋವಧೆಗೆ ಯತ್ನ; ಎನ್.ಎಸ್.ಬೋಸರಾಜು

ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 12:39 IST
Last Updated 12 ಆಗಸ್ಟ್ 2021, 12:39 IST
ಮಾನ್ವಿಯಲ್ಲಿ ಗುರುವಾರ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ತಮ್ಮ ನಿವೇಶನದ ದಾಖಲೆಗಳನ್ನು ಪ್ರದರ್ಶಿಸಿದರು
ಮಾನ್ವಿಯಲ್ಲಿ ಗುರುವಾರ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು ತಮ್ಮ ನಿವೇಶನದ ದಾಖಲೆಗಳನ್ನು ಪ್ರದರ್ಶಿಸಿದರು   

ಮಾನ್ವಿ: ಮಾನ್ವಿ ಪಟ್ಟಣದಲ್ಲಿ ಕರ್ನಾಟಕ ಗೃಹ ಮಂಡಳಿಗೆ ಸೇರಿದ ಉದ್ಯಾನ ಜಾಗಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಸ್ಪಷ್ಟೀಕರಣ ನೀಡಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ವಿಯ ಪಂಪಾ ಹೌಸಿಂಗ್ ಸೊಸೈಟಿ ವತಿಯಿಂದ ತಮಗೆ ನಿವೇಶನ ಹಂಚಿಕೆಯಾದ ಕುರಿತು ದಾಖಲೆಗಳನ್ನು ಪ್ರದರ್ಶಿಸಿದರು.

‘ಕಳೆದ ನಾಲ್ಕು ದಶಕಗಳಿಂದ ಸಕ್ರೀಯ ರಾಜಕಾರಣದಲ್ಲಿರುವ ನನ್ನ ತೇಜೋವಧೆಗೆ ಕೆಲವರು ಪ್ರಯತ್ನಿಸುತ್ತಿರುವುದು ಸರಿಯಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಮಾನ್ವಿ ಪಟ್ಟಣದಲ್ಲಿ ಹಲವು ಉದ್ಯಾನಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ರಾಜಕೀಯ ಕಾರಣಕ್ಕಾಗಿ ಉದ್ಯಾನ ಜಾಗ ಒತ್ತುವರಿ ಆರೋಪ ಮಾಡುತ್ತಿರುವುದು ಕ್ಷುಲ್ಲಕ ಸಂಗತಿ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘1978ರಲ್ಲಿ ಪಂಪಾ ಹೌಸಿಂಗ್ ಸೊಸೈಟಿ ವತಿಯಿಂದ ಸರ್ವೆ ನಂ.58ರಲ್ಲಿ ನನಗೆ ನಿವೇಶನ ಹಂಚಿಕೆಯಾಗಿತ್ತು. ಈ ಕುರಿತು ಸ್ಥಳೀಯ ಪುರಸಭೆ, ನಗರ ಯೋಜನಾ ಪ್ರಾಧಿಕಾರ, ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ನೋಂದಣಿ, ಮ್ಯುಟೇಶನ್, ಕಟ್ಟಡ ನಿರ್ಮಾಣಕ್ಕೆ ಅನುಮತಿ, ತೆರಿಗೆ ಪಾವತಿ ಸೇರಿ ನಿವೇಶನ ಮಾಲೀಕತ್ವಕ್ಕೆ ಸಂಬಂಧಿಸಿದ ಎಲ್ಲಾ ಅಧಿಕೃತ ದಾಖಲೆಗಳು ಇವೆ. ಈ ನಿವೇಶನದ ಮಾಲೀಕತ್ವ ಕುರಿತು ಸ್ಥಳೀಯ ಕೆಲವು ಮುಖಂಡರು ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಹೈಕೋರ್ಟ್ 2014ರಲ್ಲಿ ನನ್ನ ಪರವಾಗಿ ತೀರ್ಪು ನೀಡಿದೆ’ ಎಂದು ಅವರು ವಿವರಿಸಿದರು.

‘ಪಂಪಾ ಹೌಸಿಂಗ್ ಸೊಸೈಟಿ ನನಗೆ ಹಂಚಿಕೆ ಮಾಡಿದ್ದ ನಿವೇಶನಕ್ಕೂ, ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಉದ್ಯಾನ ಜಾಗಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮಾಜಿ ಶಾಸಕ ಜಿ.ಹಂಪಯ್ಯ ನಾಯಕ, ಮುಖಂಡರಾದ ದೊಡ್ಡಬಸಪ್ಪಗೌಡ ಭೋಗಾವತಿ, ರಾಜಾ ವಸಂತನಾಯಕ, ಅಬ್ದುಲ್ ಗಫೂರ್ ಸಾಬ್, ರೌಡೂರು ಮಹಾಂತೇಶ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.